ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡಿಲೇಡ್ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತಿದ್ದರೂ, ಮಾಜಿ ನಾಯಕ ರೋಹಿತ್ ಶರ್ಮಾ ಅವರ ಲಯಕ್ಕೆ ಮರಳುವಿಕೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮೊದಲ ಏಕದಿನ ಪಂದ್ಯದಲ್ಲಿ ಒಂದಂಕಿಗೆ ಔಟಾಗಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ 73 ರನ್ ಗಳಿಸಿ ಮಿಂಚಿದ್ದರು. ಇದೀಗ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆಗಳು ಗರಿಗೆದರಿವೆ.
ಸಿಡ್ನಿಯಲ್ಲಿ ರೋಹಿತ್ ಶರ್ಮಾ ದಾಖಲೆ: ಒಂದು ಸಿಕ್ಸರ್ ಬಾರಿಸಿದರೆ ಹೊಸ ಮೈಲುಗಲ್ಲು!
ರೋಹಿತ್ ಶರ್ಮಾ ಅವರಿಗೆ ಸಿಡ್ನಿ ಮೈದಾನ ಅತ್ಯಂತ ನೆಚ್ಚಿನದಾಗಿದೆ. ಈ ಮೈದಾನದಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದ್ದು, ಇದೇ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸುವ ಅವಕಾಶವೂ ಸಿಕ್ಕಿದೆ. ರೋಹಿತ್ ಸಿಡ್ನಿಯಲ್ಲಿ ಕೇವಲ ಒಂದು ಸಿಕ್ಸರ್ ಬಾರಿಸಿದರೆ, ಈ ಐತಿಹಾಸಿಕ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಏಷ್ಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ, ರೋಹಿತ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ಇಬ್ಬರೂ ಸಿಡ್ನಿ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ತಲಾ ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿ ಸಮಬಲದಲ್ಲಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಹಿಟ್‌ಮ್ಯಾನ್ ಪ್ರದರ್ಶನ:
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ರೋಹಿತ್ ಶರ್ಮಾ ಅವರ ಏಕದಿನ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿದೆ. ಅವರು ಇಲ್ಲಿ ಆಡಿದ ಐದು ಏಕದಿನ ಪಂದ್ಯಗಳಲ್ಲಿ 66.60 ರ ಅದ್ಭುತ ಬ್ಯಾಟಿಂಗ್ ಸರಾಸರಿಯಲ್ಲಿ 333 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಭರ್ಜರಿ ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ. ಸಿಡ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್ ಆಗಿದ್ದಾರೆ. ರೋಹಿತ್ ನಂತರ, ಸಚಿನ್ ತೆಂಡೂಲ್ಕರ್ (52ಕ್ಕೂ ಹೆಚ್ಚು ಸರಾಸರಿಯಲ್ಲಿ 315 ರನ್) ಈ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯರಾಗಿದ್ದಾರೆ.
ಕೊಹ್ಲಿ ಚಿಂತೆ: ಫಾರ್ಮ್ ಮತ್ತು ಸಿಡ್ನಿ ದಾಖಲೆ ಎರಡೂ ಸಪ್ಪೆ!
ರೋಹಿತ್ ಶರ್ಮಾ ಗಮನಾರ್ಹ ದಾಖಲೆ ಹೊಂದಿದ್ದರೆ, ವಿರಾಟ್ ಕೊಹ್ಲಿ ಸಿಡ್ನಿ ಮೈದಾನದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ, ಅವರು ಕೇವಲ 24.33 ರ ಸಾಧಾರಣ ಸರಾಸರಿಯಲ್ಲಿ 146 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಕೊಹ್ಲಿ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಬಂದಿದೆ. ಈ ಸರಣಿಯಲ್ಲಿ ಕೊಹ್ಲಿ ಇನ್ನೂ ತಮ್ಮ ಖಾತೆಯನ್ನೇ ತೆರೆಯದ ಕಾರಣ, ಸಿಡ್ನಿಯಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕ್ಲೀನ್ ಸ್ವೀಪ್ ತಪ್ಪಿಸುವುದು ಭಾರತಕ್ಕೆ ಅನಿವಾರ್ಯ:
ಸತತ ಎರಡು ಪಂದ್ಯಗಳನ್ನು ಸೋತ ನಂತರ ಭಾರತ ಈಗಾಗಲೇ ಸರಣಿಯನ್ನು ಕಳೆದುಕೊಂಡಿದೆ. ಸಿಡ್ನಿ ಏಕದಿನ ಪಂದ್ಯದ ಗೆಲುವು ಭಾರತಕ್ಕೆ ಕೇವಲ ಪ್ರತಿಷ್ಠೆಯ ವಿಷಯವಲ್ಲ, ಇದು ಕ್ಲೀನ್ ಸ್ವೀಪ್ ಮುಜುಗರದಿಂದ ಪಾರಾಗಲು ಅತ್ಯಗತ್ಯವಾಗಿದೆ. ಆಸ್ಟ್ರೇಲಿಯಾ ಇದುವರೆಗೆ ಯಾವುದೇ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಿಲ್ಲ. ಈ ಅಪರೂಪದ ದಾಖಲೆಯನ್ನು ಮುರಿಯಲು ಕಾಂಗರೂ ಪಡೆಗೆ ಈಗ ಉತ್ತಮ ಅವಕಾಶವಿದೆ.

