ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬ ಹಾಗೂ ರಜಾದಿನಗಳ ಸಮಯದಲ್ಲಿ ಮೈಸೂರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗಾಗಿ ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಗುಡ್ ನ್ಯೂಸ್ ನೀಡಿದ್ದಾರೆ. ಸಾಮಾನ್ಯವಾಗಿ ಪ್ರತೀ ಮಂಗಳವಾರ ಮೃಗಾಲಯಕ್ಕೆ ರಜೆ ನೀಡಲಾಗುತ್ತದೆ. ಆದರೆ ಪ್ರವಾಸಿಗರ ಸೌಲಭ್ಯಕ್ಕಾಗಿ ಇದೀಗ ಆ ನಿಯಮದಲ್ಲಿ ಬದಲಾವಣೆ ತರಲಾಗಿದೆ.
ಮೃಗಾಲಯದ ನಿರ್ದೇಶಕಿ ಅನುಷ ಅವರ ಮಾಹಿತಿಯ ಪ್ರಕಾರ, ದಸರಾ ಹಾಗೂ ಸರ್ಕಾರಿ ರಜಾದಿನಗಳು ಮಂಗಳವಾರ ಬಿದ್ದರೆ, ಆ ದಿನ ಮೃಗಾಲಯವನ್ನು ತೆರೆಯಲಾಗುತ್ತದೆ. ಹಿಂದಿನ ವರ್ಷದಲ್ಲಿಯೂ ದಸರಾ ಸಮಯದಲ್ಲಿ ಇದೇ ಕ್ರಮ ಕೈಗೊಳ್ಳಲಾಗಿತ್ತು. ಆ ವೇಳೆ ಸಾವಿರಾರು ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಅದನ್ನು ಗಮನಿಸಿ ಈ ವರ್ಷವೂ ಅದೇ ಕ್ರಮ ಮುಂದುವರಿಸಲು ನಿರ್ಧರಿಸಲಾಗಿದೆ.
ಮೃಗಾಲಯದ ನೌಕರರು ಹಾಗೂ ಪ್ರಾಣಿಗಳಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಮಂಗಳವಾರ ರಜೆ ಇರುತ್ತದೆ. ಆದರೆ ಹಬ್ಬ ಹಾಗೂ ಸಾರ್ವಜನಿಕ ರಜಾದಿನಗಳಲ್ಲಿ ಪ್ರವಾಸಿಗರ ಹೆಚ್ಚುವರಿ ಸಂಖ್ಯೆಯನ್ನು ಗಮನಿಸಿ ಮೃಗಾಲಯ ಮುಚ್ಚಿದರೆ ಜನರಿಗೆ ನಿರಾಶೆಯಾಗುತ್ತದೆ ಎಂಬ ಕಾರಣದಿಂದ ಇಲಾಖೆ ಈ ತೀರ್ಮಾನ ಕೈಗೊಂಡಿದೆ.
ನಿರ್ದೇಶಕಿ ಅನುಷ ಅವರು ಮನವಿ ಮಾಡಿದ್ದು, “ಮಂಗಳವಾರ ರಜೆ ಇದ್ದರೂ, ಹಬ್ಬ ಅಥವಾ ಸರ್ಕಾರಿ ರಜಾದಿನ ಬಿದ್ದರೆ ಮೃಗಾಲಯ ತೆರೆದಿರುತ್ತದೆ ಎಂಬುದನ್ನು ಜನರು ಗಮನಿಸಬೇಕು. ಕೆಲ ಆಟೋ ಚಾಲಕರು ಅಥವಾ ಗೈಡ್‌ಗಳು ಮೃಗಾಲಯ ಮುಚ್ಚಿದೆ ಎಂದು ತಪ್ಪು ಮಾಹಿತಿ ನೀಡಿ ಪ್ರವಾಸಿಗರನ್ನು ಬೇರೆಡೆ ಕರೆದೊಯ್ಯಬಾರದು,” ಎಂದು ತಿಳಿಸಿದ್ದಾರೆ.