February 7, 2026
Saturday, February 7, 2026
spot_img

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಸ್ಟೇಷನ್ ಪಕ್ಕಾದಲ್ಲಿ ನಿಲ್ಲುತ್ತೆ ಬಿಎಂಟಿಸಿ ಬಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬಿಎಂಟಿಸಿ (BMTC) ಪ್ರಯಾಣಿಕ ಪ್ರಯಾಣಕ್ಕೆ ಮತ್ತಷ್ಟು ಸಹಕಾರಿಯಾಗುವಂತೆ ಮಹತ್ವದ ಹೆಜ್ಜೆಯನ್ನಿಟ್ಟಿವೆ. ಇನ್ಮುಂದೆ ಮೆಟ್ರೋ ನಿಲ್ದಾಣದಿಂದ ಇಳಿದು ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುವ ಪ್ರಯಾಸ ಇಲ್ಲ. ಬದಲಾಗಿ ಇನ್ನು ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ‘ನೇರಳೆ’ ಮತ್ತು ‘ಹಸಿರು’ ಮಾರ್ಗದ ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರದ ತೀರಾ ಸಮೀಪದಲ್ಲೇ ಹೊಸದಾಗಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.

ಫೆಬ್ರವರಿ 05, 2026 ರಿಂದ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕ ಕೊಂಡಿಯನ್ನು ಬಲಪಡಿಸಲು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಹಲವು ಕಡೆಗಳಲ್ಲಿ ಮೆಟ್ರೋ ನಿಲ್ದಾಣಗಳು ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸಾಕಷ್ಟು ಅಂತರವಿತ್ತು. ಇದರಿಂದಾಗಿ ಮೆಟ್ರೋದಿಂದ ಇಳಿದ ಪ್ರಯಾಣಿಕರು ಬಸ್ ಹಿಡಿಯಲು ಸಾಕಷ್ಟು ದೂರ ನಡೆಯಬೇಕಿತ್ತು ಅಥವಾ ರಸ್ತೆ ದಾಟಲು ಪರದಾಡಬೇಕಿತ್ತು. ಈ ಅಸೌಕರ್ಯವನ್ನು ಮನಗಂಡ ಬಿಎಂಆರ್‌ಸಿಎಲ್, ಬಿಎಂಟಿಸಿ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಪ್ರಯಾಣಿಕರಿಗೆ ಅನುಕೂಲವಾಗುವ ಜಾಗಗಳಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಗುರುತಿಸಿದ್ದಾರೆ.

ನೇರಳೆ ಮಾರ್ಗದಲ್ಲಿ ಎಲ್ಲೆಲ್ಲಿ?
ವೈಟ್‌ಫೀಲ್ಡ್‌ನಿಂದ ಚಲಘಟ್ಟದವರೆಗಿನ ನೇರಳೆ ಮಾರ್ಗದಲ್ಲಿ ಸದ್ಯ ಎರಡು ಪ್ರಮುಖ ನಿಲ್ದಾಣಗಳಲ್ಲಿ ಹೊಸ ಸ್ಟಾಪ್‌ಗಳನ್ನು ನೀಡಲಾಗಿದೆ:

ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಹೋಗುವವರಿಗೆ ಅನುಕೂಲವಾಗುವಂತೆ ‘ಬಿ’ ಪ್ರವೇಶದ್ವಾರದ ಬಳಿ (ಹೋಟೆಲ್ ಒಬೆರಾಯ್ ಎದುರು) ಬಸ್ ನಿಲ್ದಾಣ ಸ್ಥಾಪಿಸಲಾಗಿದೆ.

ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚರ್ಪಾಳ್ಯ ಕಡೆಗೆ ಹೋಗುವವರಿಗೆ ‘ಬಿ’ ಪ್ರವೇಶದ್ವಾರದ ಬಳಿ (ಡಿ’ಮಾರ್ಟ್ ಎದುರು) ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಹಸಿರು ಮಾರ್ಗದಲ್ಲಿ ಭರ್ಜರಿ ಬದಲಾವಣೆ:
ಮಾದಾವರದಿಂದ ರೇಷ್ಮೆ ಸಂಸ್ಥೆವರೆಗಿನ ಹಸಿರು ಮಾರ್ಗದಲ್ಲಿ ಅತಿ ಹೆಚ್ಚು, ಅಂದರೆ 8 ನಿಲ್ದಾಣಗಳಲ್ಲಿ ಹೊಸ ಬಸ್ ಸ್ಟಾಪ್‌ಗಳನ್ನು ನೀಡಲಾಗಿದೆ.

ಮಂಜುನಾಥ ನಗರ: ಚಿಕ್ಕಬಿದರಕಲ್ಲು ಕಡೆಯಿಂದ ಬರುವವರಿಗೆ ‘ಎ’ ದ್ವಾರದ ಬಳಿ.

ಪೀಣ್ಯ: ಮೆಟ್ರೋ ನಿಲ್ದಾಣದ ಎದುರಿನ ಸರ್ವಿಸ್ ರಸ್ತೆ ಹಾಗೂ ‘ಬಿ’ ದ್ವಾರದ ಕೆಳಭಾಗದಲ್ಲಿ.

ಲಾಲ್‌ಬಾಗ್: ನ್ಯಾಷನಲ್ ಕಾಲೇಜ್ ಕಡೆಗೆ ಹೋಗುವವರಿಗೆ ‘ಬಿ’ ದ್ವಾರದ ಬಳಿ.

ಸೌತ್ ಎಂಡ್ ಸರ್ಕಲ್: ಜಯನಗರ ಕಡೆಗೆ ತೆರಳುವವರಿಗೆ ‘ಎ’ ದ್ವಾರದ ಬಳಿ.

ಜಯಪ್ರಕಾಶ್ ನಗರ (JP Nagar): ಬನಶಂಕರಿ ಕಡೆಗೆ ಹಾಗೂ ಯಲಚೇನಹಳ್ಳಿ ಕಡೆಗೆ ಸಂಚರಿಸುವವರಿಗೆ ‘ಸಿ’ ಮತ್ತು ‘ಡಿ’ ದ್ವಾರದ ಬಳಿ ಪ್ರತ್ಯೇಕ ನಿಲ್ದಾಣಗಳು.

ಕೊಣನಕುಂಟೆ ಕ್ರಾಸ್: ಪಿಲ್ಲರ್ ಸಂಖ್ಯೆ 147 ಮತ್ತು 148 ರ ಬಳಿ (ಎರಡೂ ಬದಿಯಲ್ಲಿ) ಬಸ್ ನಿಲ್ದಾಣ ಒದಗಿಸಲಾಗಿದೆ.

ವಜ್ರಹಳ್ಳಿ & ತಲಘಟ್ಟಪುರ: ಈ ಎರಡೂ ನಿಲ್ದಾಣಗಳಲ್ಲೂ ‘ಎ’ ಮತ್ತು ‘ಬಿ’ ದ್ವಾರಗಳ ಬಳಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ತೆರಳುವ ಪ್ರಯಾಣಿಕರಿಗೆ ಇನ್ಮುಂದೆ ಮೆಟ್ರೋ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಬಿಎಂಟಿಸಿಯ ‘ವಾಯುವಜ್ರ’ (Vayu Vajra) ಬಸ್‌ಗಳಿಗೆ ನಿಲುಗಡೆ ನೀಡಲಾಗಿದೆ. ಪ್ರಯಾಣಿಕರು ತಾವು ಇಳಿಯುವ ಯಾವುದೇ ಮೆಟ್ರೋ ನಿಲ್ದಾಣದಿಂದ ನೇರವಾಗಿ ಏರ್‌ಪೋರ್ಟ್ ಬಸ್‌ಗಳನ್ನು ಹತ್ತಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !