Tuesday, October 14, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಯೆಲ್ಲೋ ಲೈನ್ ಉದ್ಘಾಟನೆಗೆ ಕೌಂಟ್ ಡೌನ್ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ರೈಲಿನ ಬಹುನಿರೀಕ್ಷಿತ ಯೆಲ್ಲೋ ಲೈನ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟರ್ ಅಧಿಕೃತವಾಗಿ ಘೋಷಿಸಿದ್ದಾರೆ.

ಆರ್‌ವಿ ರಸ್ತೆದಿಂದ ಬೊಮ್ಮಸಂದ್ರವರೆಗೆ ಒಟ್ಟು 19.5 ಕಿಲೋಮೀಟರ್ ಉದ್ದದ ಹಳದಿ ಮಾರ್ಗವನ್ನು ಒಳಗೊಂಡ ಈ ಮಾರ್ಗವು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಿಂದ ಪ್ರತಿದಿನ ಸರಾಸರಿ 25,000ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡುವ ನಿರೀಕ್ಷೆ ಇದೆ.

ಹಳದಿ ಮಾರ್ಗದ ರೈಲುಗಳು ಪ್ರಾರಂಭಿಕ ಹಂತದಲ್ಲಿ 20 ರಿಂದ 30 ನಿಮಿಷಗಳ ಅಂತರದಲ್ಲಿ ಸಂಚರಿಸಲಿದ್ದು, ಜನಪ್ರವಾಹವನ್ನು ಅನುಸರಿಸಿ ನಂತರ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗುವುದು ಎಂದು ಬಿಎಮ್‌ಆರ್‌ಸಿಎಲ್ (BMRCL) ಮೂಲಗಳು ತಿಳಿಸಿವೆ.

ಈ ಮಾರ್ಗದ ಸುರಕ್ಷತೆಯ ಬಗ್ಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದ ತಂಡ ಇದೀಗ ತಪಾಸಣೆ ನಡೆಸಿದ್ದು, ವರದಿ ಸಲ್ಲಿಸಲಾಗಿದೆ. ವರದಿಯಲ್ಲಿ ಕೆಲವು ಸಣ್ಣ ಪುಟ್ಟ ತಾಂತ್ರಿಕ ಸುಧಾರಣೆಗಳ ಶಿಫಾರಸು ಮಾಡಲಾಗಿದೆ. ಬಿಎಮ್‌ಆರ್‌ಸಿಎಲ್ ಈ ತಿದ್ದುಪಡಿ ಕಾರ್ಯಗಳನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿ ಸೇವೆ ಆರಂಭಿಸಲು ಸಜ್ಜಾಗಿದೆ.

ಇದೇ ದಿನ ಪ್ರಧಾನಿ ಮೋದಿ, ಬೆಂಗಳೂರು ಮೆಟ್ರೋ ಫೇಸ್–3 ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ಕೂ ಚಾಲನೆ ನೀಡಲಿದ್ದಾರೆ. ಫೇಸ್–3 ಯೋಜನೆಯಡಿ ಸುಮಾರು 45 ಕಿ.ಮೀ ಉದ್ದದ ಹೊಸ ಮಾರ್ಗಗಳು ನಗರದಲ್ಲಿ ರೂಪು ಪಡೆಯಲಿದ್ದು, ಮುಂದಿನ ಹಂತದ ಬೃಹತ್ ಮೂಲಸೌಕರ್ಯ ವಿಸ್ತರಣೆಗೆ ಇದು ನಾಂದಿ ಎನಿಸಲಿದೆ.

error: Content is protected !!