Monday, September 15, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮತ್ತೊಂದು ಹೊಸ ಮಾರ್ಗದಲ್ಲಿ ಓಡಲಿದೆ ‘ನಮ್ಮ ಮೆಟ್ರೋ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನವಾಗಿ ಮತ್ತೊಂದು ಹೊಸ ಮೆಟ್ರೋ ಮಾರ್ಗ ಶೀಘ್ರದಲ್ಲೇ ಸೇವೆಗೆ ಬರಲಿದೆ. ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪರ್ಪಲ್, ಗ್ರೀನ್ ಮತ್ತು ಯೆಲ್ಲೋ ಲೈನ್‌ಗಳ ಜೊತೆಗೂಡಿ ಹೊಸ ಗುಲಾಬಿ ಮೆಟ್ರೋ ಮಾರ್ಗ (Pink Line) ಸೇರಲಿದೆ. ಈ ಮೂಲಕ ನಗರದ ಹೆಚ್ಚಿನ ಭಾಗಗಳು ಮೆಟ್ರೋ ಸಂಪರ್ಕಕ್ಕೆ ಬರಲಿದ್ದು, ಸಾರ್ವಜನಿಕರ ಸಂಚಾರ ಸುಗಮಗೊಳ್ಳಲಿದೆ.

21.3 ಕಿಲೋಮೀಟರ್ ಉದ್ದದ ಗುಲಾಬಿ ಮಾರ್ಗ
ಕಾಳೇನ ಅಗ್ರಹಾರದಿಂದ ನಾಗಾವರವರೆಗಿನ 21.3 ಕಿಲೋಮೀಟರ್ ಉದ್ದದ ಗುಲಾಬಿ ಮೆಟ್ರೋ ಮಾರ್ಗ ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆ. ಗೊಟ್ಟಿಗೆರೆ, ತಾವರೇಕೆರೆ, ಡೈರಿ ಸರ್ಕಲ್, ನಾಗಾವರ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳ ಮೂಲಕ ಈ ಲೈನ್ ಸಾಗಲಿದೆ.

ಸುರಂಗ ಮತ್ತು ಫ್ಲೈಓವರ್ ವ್ಯವಸ್ಥೆ
ಈ ಮಾರ್ಗದಲ್ಲಿ 13 ಕಿಲೋಮೀಟರ್ ಸುರಂಗ ಮಾರ್ಗವಿದ್ದು, ಡೈರಿ ಸರ್ಕಲ್‌ನಿಂದ ನಾಗಾವರವರೆಗೂ ರೈಲು ಭೂಗತದಲ್ಲಿ ಸಂಚರಿಸಲಿದೆ. ಉಳಿದ 7.5 ಕಿಲೋಮೀಟರ್ ದೂರದಲ್ಲಿ ಫ್ಲೈಓವರ್ ಮೂಲಕ ಮೆಟ್ರೋ ಸಂಚಾರ ನಡೆಯಲಿದೆ. ಇದರಿಂದ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಹಲವು ಮಾರ್ಗಗಳಿಗೆ ನೇರ ಪರಿಹಾರ ಸಿಗಲಿದೆ.

ಗುಲಾಬಿ ಮಾರ್ಗವನ್ನು ಎರಡು ಹಂತಗಳಲ್ಲಿ ಕಾರ್ಯಾಚರಣೆ ಮಾಡುವ ಯೋಜನೆ ರೂಪಿಸಲಾಗಿದೆ. ಮೊದಲ ಹಂತದ ಮೆಟ್ರೋ ಸೇವೆ 2026ರ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಹಂತದ ಸೇವೆ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಜನರಿಗೆ ಲಭ್ಯವಾಗಲಿದೆ.

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಯೆಲ್ಲೋ ಲೈನ್ ಯಶಸ್ವಿಯಾಗಿ ಸಂಚಾರ ನಡೆಸುತ್ತಿದೆ. ಆರ್‌ವಿ ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಈಗ ಪ್ರತೀ 17 ನಿಮಿಷಕ್ಕೊಮ್ಮೆ ರೈಲು ಲಭ್ಯ. 19.15 ಕಿಲೋಮೀಟರ್ ಉದ್ದದ ಈ ಮಾರ್ಗ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳ ಸಂಚಾರವನ್ನು ಸುಲಭಗೊಳಿಸಿದೆ. ಇತ್ತ ಗ್ರೀನ್ ಲೈನ್ ಮಾದಾವರದಿಂದ ಕನಕಪುರ ರಸ್ತೆಯವರೆಗೆ ಹಾಗೂ ಪರ್ಪಲ್ ಲೈನ್ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ ವಿಸ್ತರಿಸಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ.

ಇದನ್ನೂ ಓದಿ