ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀ ರಾಮಲಲ್ಲಾ ಮಂದಿರ ನಿರ್ಮಾಣದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.
ಈ ಕುರಿತು ಟ್ರಸ್ಟ್ ಮಾಹಿತಿ ಹಂಚಿಕೊಂಡಿದ್ದು, ಕಾಮಗಾರಿ ಪೂರ್ಣಗೊಂಡಿರುವ ವಿಚಾರ ಭಕ್ತರಿಗೆ ತಿಳಿಸಲು ಖುಷಿಯಾಗುತ್ತಿದೆ . ಮುಖ್ಯ ಮಂದಿರ ಹಾಗೂ ಅದರ ಒಳಗಿನ ಆರು ಮಂದಿರಗಳು ಕೂಡ ಪೂರ್ಣವಾಗಿವೆ. ಮಹಾದೇವ, ಗಣೇಶ, ಹನುಮಂತ, ಸೂರ್ಯದೇವ, ಮಾ ಭಗವತಿ ಮತ್ತು ಮಾ ಅನ್ನಪೂರ್ಣ ಮಂದಿರ ಪೂರ್ಣವಾಗಿದೆ. ಅದರೊಂದಿಗೆ ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯರ ಏಳು ಮಂಟಪಗಳು ಸಹ ಪೂರ್ಣಗೊಂಡಿವೆ. ಸಂತ ತುಳಸಿದಾಸ ಮಂದಿರವೂ ಪೂರ್ಣವಾಗಿದ್ದು. ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಭಕ್ತರ ವ್ಯವಸ್ಥೆಗಳಿಗೆ ನೇರವಾಗಿ ಸಂಬಂಧಿಸಿದ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿದೆ. ಭಕ್ತರಿಗೆ ಸಂಬಂಧಪಡದ 3.5 ಕಿಲೋಮೀಟರ್ ಉದ್ದದ ಗಡಿ ಗೋಡೆ, ಟ್ರಸ್ಟ್ ಕಚೇರಿ, ಅತಿಥಿ ಗೃಹ, ಸಭಾಂಗಣದ ಕಾಮಗಾರಿಗಳು ಮಾತ್ರ ಪ್ರಗತಿಯಲ್ಲಿವೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಕಾರ, ಅವೆಲ್ಲದರ ಮೇಲೆ ಧ್ವಜಸ್ತಂಭಗಳು ಮತ್ತು ಕಲಶಗಳನ್ನು ಅಳವಡಿಸಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸೋಮವಾರ ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ರಸ್ತೆಗಳಿಗೆ ಕಲ್ಲು ಹಾಕುವುದು ಮತ್ತು ನೆಲಗಟ್ಟು ಮಾಡುವುದು, ಭೂಮಿಯನ್ನು ಸುಂದರಗೊಳಿಸುವುದು, ಹಸಿರೀಕರಣಗೊಳಿಸುವುದು ಮತ್ತು 10 ಎಕರೆ ಪಂಚವಟಿಯನ್ನು ನಿರ್ಮಿಸುವ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

