ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಅತ್ಯಂತ ಗಿಜಿಗುಡಿದ ಜಂಕ್ಷನ್‌ಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್‌ನಲ್ಲಿ ಸಂಚರಿಸುವವರ ಪಾಲಿಗೆ ಸಿಹಿ ಸುದ್ದಿ ಸಿಗುವ ಸಮಯ ಸಮೀಪಿಸಿದೆ. ವರ್ಷಗಳಿಂದ ನಿತ್ಯದ ಪ್ರಯಾಣವೇ ಸವಾಲಾಗಿದ್ದ ಈ ಭಾಗದಲ್ಲಿ ಸಂಚಾರ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿ, ಡಬ್ಬಲ್ ಡೆಕ್ಕರ್ ಫ್ಲೈಓವರ್‌ನ ಇನ್ನೊಂದು ಬದಿ ಶೀಘ್ರವೇ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ದಿಕ್ಕಿನಲ್ಲಿ ಕಾಮಗಾರಿಗೆ ವೇಗ ನೀಡಿದ್ದು, ಜನವರಿ ಅಂತ್ಯದೊಳಗೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದೆ.
ಕಳೆದ ವರ್ಷ ರಾಗಿಗುಡ್ಡ ಹಾಗೂ ಹೆಚ್‌ಎಸ್‌ಆರ್ ಲೇಔಟ್ ಸಂಪರ್ಕಿಸುವ ದಿಕ್ಕಿನಲ್ಲಿ ಫ್ಲೈಓವರ್ ಒಂದು ಬದಿ ತೆರೆಯಲಾಗಿತ್ತು. ಇದರಿಂದ ಸಿಲ್ಕ್ ಬೋರ್ಡ್ ಬಳಿ ಟ್ರಾಫಿಕ್ ಒತ್ತಡ ಕೆಲಮಟ್ಟಿಗೆ ತಗ್ಗಿತ್ತು. ಆದರೆ ಉಳಿದ ಬದಿ ಮಾರ್ಗ ಕಾಮಗಾರಿ ಪೂರ್ಣವಾಗದ ಕಾರಣ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಭಾಗದಲ್ಲಿ ಸಂಚಾರ ಸಮಸ್ಯೆ ಮುಂದುವರಿದಿತ್ತು.
ಈಗ ಸುಮಾರು 80 ಶೇಕಡಾ ಸಿವಿಲ್ ಕಾಮಗಾರಿ ಮುಗಿದಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಬಳಿ ವಯಾಡಕ್ಟ್ ಅಳವಡಿಕೆ ಮಾತ್ರ ಬಾಕಿಯಾಗಿದೆ. ಈ ಕೆಲಸವೂ ತ್ವರಿತವಾಗಿ ನಡೆಯುತ್ತಿದ್ದು, ಜನವರಿ ಆರಂಭದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ, ಅಂತ್ಯದೊಳಗೆ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿ ರಸ್ತೆ ತೆರೆಯಲು ಬಿಎಂಆರ್‌ಸಿಎಲ್ ಯೋಜಿಸಿದೆ.

