February 22, 2026
Sunday, February 22, 2026
spot_img

ಬೆಂಗಳೂರಿನ ಜನತೆಗೆ ಸಿಹಿ ಸುದ್ದಿ: 2,500ಕ್ಕೂ ಅಧಿಕ ‘ಡೆಂಜರಸ್’ ನಾಯಿಗಳ ಸೆರೆಗೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಜಿಬಿಎ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಸುಪ್ರೀಂಕೋರ್ಟ್ ನೀಡಿದ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ, ನಗರದ ಕ್ರೂರ ಸ್ವಭಾವವುಳ್ಳ ಬೀದಿ ನಾಯಿಗಳನ್ನು ಪ್ರತ್ಯೇಕಿಸಿ ಅವುಗಳ ಪಾಲನೆಗಾಗಿ ಬೃಹತ್ ಶೆಲ್ಟರ್‌ಗಳನ್ನು ನಿರ್ಮಿಸಲು ಜಿಬಿಎ ಮುಂದಾಗಿದೆ.

ಬೆಂಗಳೂರಿನಲ್ಲಿ ಸುಮಾರು 2.30 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇದರಲ್ಲಿ ಅತೀ ಹೆಚ್ಚು ಆಕ್ರಮಣಕಾರಿಯಾಗಿರುವ 2,500ಕ್ಕೂ ಹೆಚ್ಚು ನಾಯಿಗಳನ್ನು ಗುರುತಿಸಲಾಗಿದೆ.

ಒಟ್ಟು 7 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 5 ಪಾಲಿಕೆ ವ್ಯಾಪ್ತಿಗಳಲ್ಲಿ ಅತ್ಯಾಧುನಿಕ ಶೆಲ್ಟರ್‌ಗಳನ್ನು ನಿರ್ಮಿಸಲು ಜಿಬಿಎ ಪ್ಲಾನ್ ಮಾಡಿದೆ.

ಈಗಾಗಲೇ ನಗರದ ಹೊರವಲಯದ ಭಂಗೀಪುರ, ಬೆಟ್ಟಹಳ್ಳಿ ಹಾಗೂ ಮಹದೇವಪುರ ಭಾಗಗಳಲ್ಲಿ ಸೂಕ್ತ ಜಾಗದ ಪರಿಶೀಲನೆ ನಡೆಸಲಾಗುತ್ತಿದೆ.

ಈ ಶೆಲ್ಟರ್‌ಗಳಲ್ಲಿ ಪ್ರತಿ ಕೇಂದ್ರಕ್ಕೆ 500 ರಿಂದ 600 ನಾಯಿಗಳನ್ನು ಇರಿಸಲಾಗುವುದು. ಇವುಗಳಿಗೆ ಬೇಕಾದ ಆಹಾರ, ರೇಬಿಸ್ ವಿರೋಧಿ ಲಸಿಕೆ ಮತ್ತು ಸಂತಾನಹರಣ ಚಿಕಿತ್ಸೆಯ ಜವಾಬ್ದಾರಿಯನ್ನು ಜಿಬಿಎ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ.

ಕಳೆದ ಕೆಲವು ತಿಂಗಳುಗಳಿಂದ ನಾಯಿ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಬಿಎ ಕೈಗೊಂಡಿರುವ ಈ ನಿರ್ಧಾರವು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಪ್ರಾಣಿ ಹಕ್ಕುಗಳ ಕಾಯ್ದೆಯಡಿ ನಾಯಿಗಳಿಗೆ ಹಿಂಸೆಯಾಗದಂತೆ ಅವುಗಳನ್ನು ಸಂರಕ್ಷಿಸಿ ಸಾಕುವ ಈ ಕ್ರಮವು ನಗರದ ಸುರಕ್ಷತೆಗೆ ಹೊಸ ಭರವಸೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !