March 11, 2026
Wednesday, March 11, 2026
spot_img

ಸಾರಿಗೆ ನೌಕರರಿಗೆ ಗುಡ್‌ ನ್ಯೂಸ್‌: ರಾಜ್ಯ ಸರ್ಕಾರದಿಂದ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. 38 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ವೇತನ ಹಿಂಬಾಕಿ (ಅರಿಯರ್ಸ್) ಹಾಗೂ ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. 26 ತಿಂಗಳ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ (KSRTC, BMTC, NWKRTC, KKRTC) ನೌಕರರು ಒಟ್ಟು 38 ತಿಂಗಳ ವೇತನ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸುತ್ತಿದ್ದರು.

ಈ ಬಗ್ಗೆ ರಾಜ್ಯ ಸರ್ಕಾರ, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ನೀಡಲು ಅಧಿಕೃತ ಒಪ್ಪಿಗೆ ಸೂಚಿಸಿದೆ. ಅಂದರೆ ಹಿಂಬಾಕಿ 1239.47 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಜೊತೆಗೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ ವೇತನ ಹೆಚ್ಚಳ ಪರಿಷ್ಕರಣೆಗೂ ಆದೇಶಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ (ಫೆ.19) ಕರ್ನಾಟಕ ರಾಜ್ಯ ಸಾರಿಗೆ ನೌಕರರು ‘ಬೆಂಗಳೂರು ಚಲೋ’ಕ್ಕೆ ಕರೆ ನೀಡಿದ್ದರು. ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜತೆ ರಾಜ್ಯ ಸರ್ಕಾರ ಸಭೆ ನಡೆಸಿ, ಕೆಲ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ನೀಡಿದೆ.

ಸಾರಿಗೆ ಸಚಿವರು ಇಂದು ತಡರಾತ್ರಿಯವರೆಗೂ ಸಂಘಟನೆಗಳೊಂದಿಗೆ ಸಭೆ ನಡೆಸಿ, ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿರ್ಧಾರದಿಂದಾಗಿ ನಾಳೆ ನಡೆಯಬೇಕಿದ್ದ ಸೇವೆಯ ವ್ಯತ್ಯಯದ ಆತಂಕ ದೂರವಾದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !