Friday, November 28, 2025

ಬೆಂಗಳೂರಿಗೆ ಬಂದಿಳಿಯುವ ಪ್ರಯಾಣಿಕರಿಗೆ ಶುಭ ಸುದ್ದಿ: ಇನ್ಮುಂದೆ ಆಟೋ, ಕ್ಯಾಬ್‌ಗಾಗಿ ಪರದಾಟವಿಲ್ಲ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿದಿನ ಲಕ್ಷಾಂತರ ಪ್ರಯಾಣಿಕರ ಸಂಚಾರದಿಂದ ಗಿಜಿಗುಡುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಸೇರಿದಂತೆ ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಇದೀಗ ಒಂದು ಸಿಹಿ ಸುದ್ದಿ ಸಿಕ್ಕಿದೆ. ನಿಲ್ದಾಣದಿಂದ ಮನೆಗೆ ಹೋಗಲು ಆಟೋ ಅಥವಾ ಕ್ಯಾಬ್‌ಗಳಿಗಾಗಿ ಪರದಾಡುವುದು, ಚಾಲಕರ ದುಬಾರಿ ದರಗಳಿಗೆ ಬಲಿಯಾಗುವುದು ಇನ್ನು ಮುಂದೆ ತಪ್ಪಲಿದೆ.

ಈ ಸಮಸ್ಯೆಗಳಿಗೆ ಪರಿಹಾರ ನೀಡಲು, ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹವಾನಿಯಂತ್ರಿತ ಕಿಯೋಸ್ಕ್‌ಗಳ ಮೂಲಕ ಖಾಸಗಿ ಅಗ್ರಿಗೇಟರ್ ಕಂಪನಿಗಳ ಆಟೋ ಮತ್ತು ಕ್ಯಾಬ್ ಬುಕಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ.

ಇಲ್ಲಿಯವರೆಗೆ, ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಬರುವ ಪ್ರಯಾಣಿಕರು ಮನೆಗೆ ತೆರಳಲು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಕೆಲವು ಆಟೋ ಮತ್ತು ಕ್ಯಾಬ್ ಚಾಲಕರು ಕರೆದ ಕಡೆ ಬರುವುದಿಲ್ಲ, ಸ್ಮಾರ್ಟ್‌ಫೋನ್ ಇಲ್ಲದವರಿಗೆ ಆ್ಯಪ್ ಆಧಾರಿತ ಬುಕಿಂಗ್ ಸಾಧ್ಯವಾಗುತ್ತಿರಲಿಲ್ಲ, ಹಾಗೂ ಚಾಲಕರು ನಿಗದಿತ ದರಕ್ಕಿಂತ ‘ಒನ್ ಟು ಡಬಲ್’ ಹಣ ಕೇಳುತ್ತಿದ್ದರು. ಅವಸರದಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಅಧಿಕ ದರ ಪಾವತಿಸಬೇಕಿತ್ತು.

ಹೊಸ ವ್ಯವಸ್ಥೆಯ ಲಾಭವೇನು?

ಈ ಹೊಸ ಕಿಯೋಸ್ಕ್ ವ್ಯವಸ್ಥೆಯಿಂದಾಗಿ, ಪ್ರಯಾಣಿಕರು ಇನ್ಮುಂದೆ ಮೊಬೈಲ್ ಫೋನ್ ಅವಲಂಬಿಸಬೇಕಿಲ್ಲ ಅಥವಾ ರಸ್ತೆಯಲ್ಲಿ ಗಂಟೆಗಟ್ಟಲೆ ನಿಂತು ಕಾಯಬೇಕಾಗಿಲ್ಲ. ರೈಲಿನಿಂದ ಇಳಿದ ಪ್ರಯಾಣಿಕರು ನೇರವಾಗಿ ಎರಡು ಖಾಸಗಿ ಎಸಿ ಕಿಯೋಸ್ಕ್ ರೂಮ್‌ಗಳಿಗೆ ತೆರಳಬಹುದು.

ಕಿಯೋಸ್ಕ್‌ನಲ್ಲಿರುವ ಸಿಬ್ಬಂದಿಗಳು, ಪ್ರಯಾಣಿಕರು ತಲುಪಬೇಕಾದ ಸ್ಥಳದ ಮಾಹಿತಿಯನ್ನು ಪಡೆದು, ಅಧಿಕೃತ ದರದಲ್ಲಿ ಆಟೋ ಅಥವಾ ಕ್ಯಾಬ್ ಅನ್ನು ಬುಕ್ ಮಾಡಿ ಕೊಡುತ್ತಾರೆ. ಈ ಸೌಲಭ್ಯದಿಂದಾಗಿ ಕೆಲ ಆಟೋ ಮತ್ತು ಕ್ಯಾಬ್ ಚಾಲಕರ ‘ಒನ್ ಟು ಡಬಲ್’ ದರ ವಸೂಲಿ ಆಟಾಟೋಪಕ್ಕೆ ಖಂಡಿತವಾಗಿಯೂ ಬ್ರೇಕ್ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಯಾವ ನಿಲ್ದಾಣಗಳಲ್ಲಿ ಆರಂಭ?

ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಸೇರಿದಂತೆ ನಗರದ ಒಟ್ಟು ಆರು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಈ ಬುಕ್ಕಿಂಗ್ ಕಿಯೋಸ್ಕ್‌ಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ಅವುಗಳೆಂದರೆ:

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ (ಮೆಜೆಸ್ಟಿಕ್)

ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್

ಯಶವಂತಪುರ ರೈಲ್ವೆ ಸ್ಟೇಷನ್

ಹೂಡಿ ರೈಲ್ವೆ ಸ್ಟೇಷನ್

ಕೆ.ಆರ್ ಪುರ ರೈಲ್ವೆ ಸ್ಟೇಷನ್

ವೈಟ್ ಫಿಲ್ಡ್ ರೈಲ್ವೆ ಸ್ಟೇಷನ್

ಒಟ್ಟಾರೆ, ಈ ಹೊಸ ಸೌಲಭ್ಯವು ಬೆಂಗಳೂರಿಗೆ ಬರುವ ಮತ್ತು ಹೋಗುವ ಸಾವಿರಾರು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಿ, ಅವರಿಗೆ ನೆಮ್ಮದಿಯ ಪ್ರಯಾಣದ ಅನುಭವವನ್ನು ನೀಡಲಿದೆ.

error: Content is protected !!