ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ನಾಲ್ಕನೇ ರೈಲು ಸಂಚಾರಕ್ಕೆ ಇಳಿಯಲಿದ್ದು, ಇದರಿಂದ ಪ್ರಯಾಣಿಕರು ಕಾಯುವ ಅವಧಿ ಕಡಿಮೆಯಾಗಲಿದೆ. ಕಳೆದ ಒಂದು ತಿಂಗಳಿಂದ ಕಡಿಮೆ ರೈಲುಗಳ ಕಾರಣ ಎದುರಿಸುತ್ತಿದ್ದ ತೊಂದರೆಗೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ.
ಯೆಲ್ಲೋ ಲೈನ್ ಮೆಟ್ರೋ ಆಗಸ್ಟ್ 10ರಂದು ಸಾರ್ವಜನಿಕರಿಗೆ ಆರಂಭವಾದರೂ, ಅಲ್ಲಿ ಸಂಚಾರ ಮಾಡುತ್ತಿದ್ದ ರೈಲುಗಳ ಸಂಖ್ಯೆ ಅಲ್ಪವಾಗಿತ್ತು. ಕೇವಲ ಮೂರು ರೈಲುಗಳೇ ಓಡಾಟದಲ್ಲಿದ್ದ ಕಾರಣ, ಒಂದು ರೈಲು ಹೊರಟು ಮತ್ತೊಂದು ಬರಲು 25 ನಿಮಿಷಗಳ ಕಾಲ ಗ್ಯಾಪ್ ಇರುತ್ತಿತ್ತು. ಇದರಿಂದ ಪ್ರಯಾಣಿಕರು ಹೆಚ್ಚು ಕಾಯಬೇಕಾಗುತ್ತಿತ್ತು ಮತ್ತು ಪೀಕ್ ಅವರ್ಸ್‌ನಲ್ಲಿ ಜನಸಂದಣಿ ಉಂಟಾಗುತ್ತಿತ್ತು.
ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 15ರಿಂದ ನಾಲ್ಕನೇ ರೈಲು ಸಂಚಾರ ಆರಂಭವಾಗಲಿದೆ. ಈ ಕ್ರಮದಿಂದ ರೈಲುಗಳ ನಡುವಿನ ಗ್ಯಾಪ್ 25 ನಿಮಿಷದಿಂದ 15 ನಿಮಿಷಕ್ಕೆ ಇಳಿಯುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣಿಕರ ಒತ್ತಡ ಕಡಿಮೆಯಾಗುವುದು ಖಚಿತ.
ಇದೇ ತಿಂಗಳ ಅಂತ್ಯದೊಳಗೆ ಮತ್ತೊಂದು ಹೊಸ ರೈಲು ಸೆಟ್ ಬೆಂಗಳೂರು ತಲುಪುವ ಸಾಧ್ಯತೆ ಇದೆ. ರೈಲು ತಯಾರಿಕಾ ಸಂಸ್ಥೆ ಟಿಟಿಗರ್ ಶೀಘ್ರದಲ್ಲೇ ಪೂರೈಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಅಕ್ಟೋಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಐದನೇ ರೈಲು ಕೂಡ ಸಂಚಾರ ಆರಂಭಿಸಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷೆ ವ್ಯಕ್ತಪಡಿಸಿದೆ.