ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬ ಬಂತು ಅಂದ್ರೆ, ದೇಶದಾದ್ಯಂತ ಜನರು ತಮ್ಮ ಮನೆ ಕಡೆಗೆ ಓಟ ಶುರು ಮಾಡ್ತಾರೆ. ಈ ವರ್ಷವೂ ಅದೇ ದೃಶ್ಯ. ನಿಲ್ದಾಣಗಳಲ್ಲಿ ಜನಸಾಗರ, ಟಿಕೆಟ್ ಕೌಂಟರ್ ಮುಂದೆ ಉದ್ದ ಸಾಲುಗಳು, ತುಂಬಿದ ರೈಲು ಬೋಗಿಗಳು. ಈ ಹಬ್ಬದ ಜನದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೇ ಈ ಬಾರಿ ಬೃಹತ್ ಕ್ರಮ ಕೈಗೊಂಡಿದೆ.
ಹಿಂದಿನ ವರ್ಷ ಸುಮಾರು 7,700 ಸ್ಪೆಷಲ್ ರೈಲುಗಳನ್ನು ಓಡಿಸಲಾಗಿದ್ದರೆ, ಈ ಬಾರಿ 12,000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ದೀಪಾವಳಿ ಹಾಗೂ ಛಾತ್ ಪೂಜೆ ಪ್ರಯಾಣಕ್ಕಾಗಿ ಸಜ್ಜು ಮಾಡಲಾಗಿದೆ. ಅಕ್ಟೋಬರ್ 17ರಿಂದಲೇ ರೈಲು ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗೂ ಮೀರಿದ್ದು, ದಿನಕ್ಕೊಂದು ಕೋಟಿ ಪ್ರಯಾಣಿಕರು ರೈಲು ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ 12 ಲಕ್ಷಕ್ಕೂ ಹೆಚ್ಚು ರೈಲ್ವೇ ಸಿಬ್ಬಂದಿ ಹಬ್ಬದ ವೇಳೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರು, ಯಶವಂತಪುರ, ಹುಬ್ಬಳ್ಳಿ ಹಾಗೂ ಮಂಗಳೂರು ಸೇರಿದಂತೆ ಅನೇಕ ನಿಲ್ದಾಣಗಳಿಂದ ವಿಶೇಷ ರೈಲುಗಳು ಸಂಚರಿಸುತ್ತಿವೆ. ಹುಬ್ಬಳ್ಳಿ-ಮಂಗಳೂರು (07353/07354) ಮತ್ತು ಬೆಂಗಳೂರು-ಮಂಗಳೂರು (06229/06230) ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಜೊತೆಗೆ ರೌಂಡ್ ಟ್ರಿಪ್ ಪ್ಯಾಕೇಜ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ರೈಲ್ವೇ ಇಲಾಖೆ ಡಿಸ್ಕೌಂಟ್ ಹಾಗೂ ಶೇಕಡಾ 20ರಷ್ಟು ಹಣ ಉಳಿತಾಯದ ಸೌಲಭ್ಯ ಕೂಡ ನೀಡಿದೆ.