Saturday, January 10, 2026

ಬೆಳಿಗ್ಗೆ ಸಿಹಿ ಸುದ್ದಿ, ಸಂಜೆ ಕಹಿ ಸುದ್ದಿ: ಕೋರ್ಟ್ ಕಟಕಟೆಯಲ್ಲಿ ದಳಪತಿ ವಿಜಯ್ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ, ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇಂದು (ಜನವರಿ 09) ತೆರೆಗೆ ಬರಬೇಕಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನಿರಾಕರಿಸಿದ್ದರಿಂದ ವಿವಾದ ಉಂಟಾಗಿತ್ತು.

ಸಿಬಿಎಫ್‌ಸಿ ನಿರ್ಧಾರವನ್ನು ಪ್ರಶ್ನಿಸಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಬೆಳಿಗ್ಗೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು ಸಿನಿಮಾಕ್ಕೆ ತಕ್ಷಣವೇ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿತ್ತು. ಇದು ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ನ್ಯಾಯಾಲಯವು ತನ್ನ ಆದೇಶಕ್ಕೆ ತಡೆ ನೀಡಿದೆ. ನಿರ್ಮಾಪಕರು ನ್ಯಾಯಾಲಯದ ಮೇಲೆ ಒತ್ತಡ ಹೇರಿದ್ದಾರೆ, ಪ್ರಕರಣದ ಪೂರ್ಣ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಿನಿಮಾದಲ್ಲಿ ರಾಜಕೀಯ ಅಂಶಗಳಿರುವುದರಿಂದಲೇ ಉದ್ದೇಶಪೂರ್ವಕವಾಗಿ ತಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು “ರಾಜಕೀಯ ಕುತಂತ್ರ” ಎಂದು ಕರೆದಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ವಿಜಯ್ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ಪಕ್ಷವು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹೇಳಿದೆ.

ಪ್ರಕರಣದ ಮುಂದಿನ ವಿಚಾರಣೆ ಜನವರಿ 21ಕ್ಕೆ ನಿಗದಿಯಾಗಿದೆ. ಒಂದು ವೇಳೆ ಅಂದು ಆದೇಶ ಹೊರಬಿದ್ದರೂ, ತಾಂತ್ರಿಕ ಪ್ರಕ್ರಿಯೆಗಳ ಕಾರಣದಿಂದ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ‘ಜನ ನಾಯಗನ್’ ಬೆಳ್ಳಿತೆರೆಯ ಮೇಲೆ ಬರಲು ಇನ್ನಷ್ಟು ಕಾಯುವುದು ಅನಿವಾರ್ಯವಾಗಿದೆ.

error: Content is protected !!