ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರವು ಸೆ. 22ರಿಂದ ಅನ್ವಯವಾಗುವಂತೆ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ 12ರಿಂದ 5ಕ್ಕೆ ಇಳಿಕೆ ಮಾಡಿರುವುದರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಕಡಿಮೆಯಾಗಲಿದೆ.
ನಂದಿನಿ ತುಪ್ಪ, ಗುಡ್ ಲೈಫ್ ಹಾಲು, ಬೆಣ್ಣೆ, ಚೀಸ್, ಕುರಕಲು ತಿಂಡಿಗಳು ಹಾಗೂ ಪನ್ನೀರ್‌ನ ದರವು ಕಡಿಮೆಯಾಗುವ ನಿರೀಕ್ಷೆ ಇದೆ. ಈ ಸಂಬಂಧ ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಲಿದ್ದು, ಆ ಬಳಿಕ ದರ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪನ್ನೀರ್ ಮತ್ತು ಗುಡ್ ಲೈಫ್ ಹಾಲಿಗೆ ವಿಧಿಸುತ್ತಿದ್ದ ಜಿಎಸ್‌ಟಿಯು ಶೇ. 5ರಷ್ಟಿತ್ತು. ಇದೀಗ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತುಪ್ಪ, ಬೆಣ್ಣೆ, ಚೀಸ್, ಪನ್ನೀರ್ ಹಾಗೂ ಇತರೆ ಕುರಕಲು ತಿಂಡಿಗಳ ಜಿಎಸ್‌ಟಿ ದರವು ಶೇ. 12 ರಿಂದ ಶೇ. 5ಕ್ಕೆ ಇಳಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಈ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.
ಪರಿಷ್ಕೃತ ದರವು ಸೆ. 22ರಿಂದಲೇ ಜಾರಿಗೆ ಬರಲಿದೆ. ಜಿಎಸ್‌ಟಿ ಇಳಿಕೆ ಸಂಬಂಧ ಕೇಂದ್ರದಿಂದ ಸೂಚನೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಆದೇಶ ಜಾರಿ ಮಾಡಲಾಗುವುದು. 2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌ಟಿಯನ್ನು ಶೇ. 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಲಿದೆ. ಪರಿಷ್ಕೃತ ದರ ಜಾರಿ ಸಂಬಂಧ ಆದೇಶ ಹೊರಡಿಸಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಡ್‌ನ್ಯೂಸ್: ಸೋಮವಾರದಿಂದ ಕಡಿಮೆಯಾಗಲಿದೆ ನಂದಿನಿ ಉತ್ಪನ್ನಗಳ ರೇಟ್
