ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳಲ್ಲಿ ಬಲಿಪಾಡ್ಯಮಿಯಾದ ಇಂದು ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪತ್ರ ಆಧರಿಸಿ, ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ವಿಶೇಷ ಸ್ಥಾನಮಾನ ನೀಡಿ, ಪೂಜಿಸಲಾಗುತ್ತಿದೆ. ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಗೋವುಗಳ ಮಹತ್ವದ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ದೇವಾಲಯಗಳಲ್ಲಿ ಇಂದು ಗೋವುಗಳಿಗೆ ಪೂಜೆ ಸಲ್ಲಿಸಿ, ನಂತರ ಅಕ್ಕಿ-ಬೆಲ್ಲ ಒಳಗೊಂಡ ಗೋ ಗ್ರಾಸ ನೀಡುವಂತೆ ಸೂಚಿಸಲಾಗಿದೆ.

