ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತವರ್ಷಿಣಿ’ ಮೂಲಕ ಮನೆಮಾತಾದ ನಟಿ ರಜಿನಿ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಆಪ್ತ ವಲಯದವರ ಸಮ್ಮುಖದಲ್ಲಿ ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ರನ್ನು ಮದುವೆಯಾದರು. ಈ ವಿವಾಹದ ವಿಚಾರವನ್ನು ಅವರು ಯಾವುದೇ ಮಾಧ್ಯಮಗಳ ಗಮನಕ್ಕೆ ಬಾರದಂತೆ ನೆರವೇರಿಸಿರುವುದು ಈಗ ಟಾಕ್ ಆಫ್ ದ ಟೌನ್ ಆಗಿದೆ.
ರಜಿನಿ ಮತ್ತು ಅರುಣ್ ವೆಂಕಟೇಶ್ ಹಲವು ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಫಿಟ್ನೆಸ್ ವಿಡಿಯೋಗಳು ಹಾಗೂ ಮನರಂಜನಾ ರೀಲ್ಸ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಕೆಲ ತಿಂಗಳ ಹಿಂದೆ ರಜಿನಿ ಅವರು, “ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಮಾತ್ರ, ಬೇರೆ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದರೂ, ಇದೀಗ ಅವರಿಬ್ಬರ ಮದುವೆ ನಡೆದಿರುವುದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿದೆ.
‘ಅಮೃತವರ್ಷಿಣಿ’ ಧಾರಾವಾಹಿಯಿಂದ ತಮ್ಮ ವೃತ್ತಿಜೀವನ ಆರಂಭಿಸಿದ ರಜಿನಿ, ನಂತರ ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ಶೋಗಳನ್ನು ಅವರು ನಿರೂಪಕಿಯಾಗಿ ಕೂಡ ಯಶಸ್ವಿಯಾಗಿ ನಿರ್ವಹಿಸಿದ್ದರು. ಇತ್ತೀಚೆಗೆ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಅರುಣ್ ಜೊತೆ ಮಾಡಿದ ರೀಲ್ಸ್‌ಗಳಿಂದ ಸಾಕಷ್ಟು ಟ್ರೆಂಡ್ ಆಗಿದ್ದರು.
ನವೆಂಬರ್ 10ರಂದು ನಡೆದ ಈ ವಿವಾಹ ಕೇವಲ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿತು. ಇದೀಗ ಇಬ್ಬರಿಗೂ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಶುಭಾಶಯ ಕೋರಿದ್ದಾರೆ.

