ಹೊಸ ದಿಗಂತ ವರದಿ ವಿಜಯಪುರ:
ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್ ನಲ್ಲಿ ಮೂರು ಗುಂಪಾಗಿ ಹೋರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ
ಆಡಳಿತ ನಿಷ್ಕ್ರಿಯವಾಗಿದೆ. ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು ಖರೀದಿ ಕೇಂದ್ರ, ದರ ಸಿಗದೆ ಪರದಾಡ್ತಿದ್ದಾರೆ. ಇತ್ತ ಕಡೆಗೆ ಕುರ್ಚಿಗಾಗಿ ಕಾಂಗ್ರೆಸ್ ಪ್ರತಿನಿತ್ಯ ಹೋರಾಟ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸ್ಥಾನಕ್ಕಾಗಿ ಕುದುರೆ ವ್ಯಾಪಾರ ಜೋರು ಆಗಿದೆ ಎಂದು ಕಾರಜೋಳ ಹೊಸ ಬಾಂಬ್ ಸಿಡಿಸಿದರು. ಈಗ ಕುದುರೆ ವ್ಯಾಪಾರ ಜೋರಾಗಿದೆ. ಶಾಸಕರಿಗೆ 50 ಕೋಟಿಗೆ ಆಫರ್, ನಿನ್ನೆ 70 ಕೋಟಿ ಆಫರ್ ನಡೆದಿದೆ. ಈ ವಾರದಲ್ಲಿ ನೂರು ಕೋಟಿ ತಲುಪಲಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಹಾಯಕರಾಗಿದ್ದಾರೆ. ತಾವೇ ಅಸಹಾಯಕತೆ ತೋಡಿಕೊಂಡಿದ್ದಾರೆ. ಕಾಂಗ್ರೆಸ್ ದಲಿತರನ್ನು ಯಾವ ರೀತಿ ನಡೆಸಿಕೊಳ್ತಿದ್ದಾರೆ ಗೊತ್ತಾಗ್ತಿದೆ. ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರೀಯಂಕಾ ಸರ್ವಾಧಿಕಾರಿಯಾಗಿದ್ದಾರೆ. ದಲಿತರು ಕಾಂಗ್ರೆಸ್ ಗುಲಾಮಗಿರಿ ಬಿಡಬೇಕು. ಅಸ್ಪೃಶ್ಯರನ್ನ ಮನುಷ್ಯರೆಂದು ಕಾಂಗ್ರೆಸ್ ತಿಳಿದುಕೊಂಡಿಲ್ಲ. ವಂಶಪಾರಂಪರ್ಯ ಆಡಳಿತ ದೇಶದ ದಲಿತರನ್ನ ಗೌರವದಿಂದ ಬಾಳುವಂತೆ ಮಾಡಿಲ್ಲ.
ಮುನಿಯಪ್ಪ ಆಗಲಿ ಎಂದು ಪರಮೇಶ್ವರ, ಪರಮೇಶ್ವರ ಹೆಸರು ಮುನಿಯಪ್ಪ ಹೇಳ್ತಿದ್ದಾರೆ. ಇವರ ಹೆಸರನ್ನೆ ಯಾರು ಹೇಳ್ತಿಲ್ಲ, ತಾವು ರೇಸಲ್ಲಿದ್ದೀವಿ ಎಂದು ಹೇಳಿಕೊಳ್ತಿದ್ದಾರೆ. ಇದು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ ಎಂದರು.

