ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಗಳನ್ನು ನೇರವಾಗಿ ಆರೋಗ್ಯ ಇಲಾಖೆ ತಾವೇ ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಗಳ ಯಶಸ್ವೀ ಅನುಷ್ಠಾನಕ್ಕಾಗಿ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಸರ್ಕಾರ ಅಧಿಕೃತ ಮಂಜೂರಾತಿ ನೀಡಿದೆ.
ಯೋಜನೆಯಡಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಶಿಫ್ಟ್‌ಗಳಲ್ಲಿ ಸೇವೆ ಸಲ್ಲಿಸಲು ಒಟ್ಟು 1,700 ಪೈಲಟ್ (ಚಾಲಕರು) ಮತ್ತು 1,700 ಇಎಂಟಿ (ತುರ್ತು ಚಿಕಿತ್ಸಾ ತಂತ್ರಜ್ಞರು)ಗಳನ್ನು ನೇಮಕ ಮಾಡಲಾಗುವುದು. ಇದರ ಜೊತೆಗೆ, ಜಿಲ್ಲಾ ಹಾಗೂ ಫ್ಲೀಟ್ ವ್ಯವಸ್ಥಾಪಕರು 62 ಮಂದಿ ಮತ್ತು ಎಸ್‌ಪಿಎಂ ವಿಭಾಗದ 5 ಮಂದಿ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ.
ಅದೇ ರೀತಿ ಸಹಾಯವಾಣಿ ನಿರ್ವಹಣೆಗೆ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಹಾಗೂ ಜಿಲ್ಲಾ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗುತ್ತಿದೆ. ಇದರಡಿ ಆಡಳಿತ, ನಿರ್ವಹಣೆ, ಕಾಲ್ ಸೆಂಟರ್, ತಾಂತ್ರಿಕ ವಿಭಾಗ ಸೇರಿದಂತೆ 224 ಮಂದಿ ಸಿಬ್ಬಂದಿ ನೇಮಕವಾಗಲಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಯೋಜನೆಗೆ ಅಗತ್ಯವಿರುವ ಮಾನವ ಸಂಪನ್ಮೂಲಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದೆ. ತುರ್ತು ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಮಾರ್ಗಸೂಚಿಯ ಪ್ರಕಾರ ಮುಂದಿನ ಹಂತಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಅವಕಾಶವನ್ನೂ ನೀಡಲಾಗಿದೆ.