Sunday, January 11, 2026

ನುಡಿದಂತೆ ನಡೆದ ಸರ್ಕಾರ: ಆಕ್ಸಿಜನ್ ದುರಂತದ 26 ಕುಟುಂಬಗಳಿಗೆ ಗಣರಾಜ್ಯೋತ್ಸವದಂದು ನೇಮಕಾತಿ ಭಾಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ನಾಲ್ಕು ವರ್ಷಗಳಿಂದ ಕಣ್ಣೀರಿನಲ್ಲೇ ಕೈ ತೊಳೆಯುತ್ತಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದಲ್ಲೇ ಭರವಸೆಯ ಬೆಳಕನ್ನು ನೀಡಿದೆ. 2021ರ ಮೇ 3ರಂದು ಕೋವಿಡ್ ಎರಡನೇ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ರೋಗಿಗಳ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕೃತವಾಗಿ ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನೀಡಿರುವ ಮಾಹಿತಿಯಂತೆ, ಬರುವ ಜನವರಿ 26ರ ಗಣರಾಜ್ಯೋತ್ಸವದಂದು ಮೊದಲ ಹಂತದಲ್ಲಿ ಅರ್ಹತೆ ಹೊಂದಿರುವ 26 ಕುಟುಂಬ ಸದಸ್ಯರಿಗೆ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು. ಶೈಕ್ಷಣಿಕ ಅರ್ಹತೆಯ ಕೊರತೆ ಇರುವ ಉಳಿದ ಕುಟುಂಬಗಳಿಗೆ ಪರ್ಯಾಯವಾಗಿ ಸೂಕ್ತ ಪರಿಹಾರ ನೀಡುವ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ದುರಂತವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಸಂತ್ರಸ್ತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ವಿಶೇಷವಾಗಿ ರಾಹುಲ್ ಗಾಂಧಿ ಅವರು ತಮ್ಮ ‘ಭಾರತ್ ಜೋಡೋ’ ಯಾತ್ರೆಯ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ, ನಾವು ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಕೈ ಹಿಡಿಯುತ್ತೇವೆ ಎಂದು ಮಾತು ನೀಡಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಆ ಭರವಸೆಯನ್ನು ಈಡೇರಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗಿದೆ.

ಸತತ ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮತ್ತು ಕಾಯುವಿಕೆಯ ನಂತರ, ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಈಗ ಬದುಕಿನ ಭದ್ರತೆ ಸಿಕ್ಕಂತಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!