January 29, 2026
Thursday, January 29, 2026
spot_img

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಸಚಿವ ದಿನೇಶ್‌ ಗುಂಡೂರಾವ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯಲ್ಲಿ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. . ಸಾರ್ವಜನಿಕರ ಆರೋಗ್ಯ, ರಕ್ಷಣೆ ಮತ್ತು ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟವನ್ನು ಇನ್ನಷ್ಟು ಬಲಪಡಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ . ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಆದೇಶಗಳ ಪ್ರಕಾರ ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆ ನೀಡಲು ಕೆಲವು ಮಟ್ಟಿಗೆ ಅನುಮತಿ ನೀಡಲಾಗಿದ್ದರೂ, ಅವರ ನಿಯಮಿತ ಸರ್ಕಾರಿ ಕರ್ತವ್ಯಗಳಿಗೆ ಯಾವುದೇ ರೀತಿಯ ಅಡ್ಡಿ ಉಂಟಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆಯಲ್ಲಿ ತೊಡಗುವುದರಿಂದ ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಕುಸಿಯುವ ಸಾಧ್ಯತೆಗಳಿದ್ದು ರೋಗಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ಉಂಟಾದ ಹಲವು ನಿದರ್ಶನಗಳು ಸರ್ಕಾರದ ಗಮನಕ್ಕೆ ಬಂದಿವೆ. ಕೆಲವು ಪ್ರಕರಣಗಳಲ್ಲಿ ಗಂಭೀರ ಪರಿಣಾಮಗಳು ಉಂಟಾಗಿವೆ.

ಈ ವಿಷಯವಾಗಿ ಲೋಕಾಯುಕ್ತರು ಹಲವಾರು ಸಂದರ್ಭಗಳಲ್ಲಿ ಅಭಿಪ್ರಾಯ ವ್ಯಕ್ತವಡಿಸಿದ್ದು, ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸಾರ್ವಜನಿಕ ಸೇವೆಗೆ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರಿ ವೈದ್ಯರ ಖಾಸಗಿ ಅಭ್ಯಾಸವನ್ನು ನಿಯಂತ್ರಿಸಲು ಶಿಫಾರಸ್ಸು ಮಾಡಿರುತ್ತಾರೆ. ಕೇರಳ ರಾಜ್ಯ ಸೇರಿ ಇತರ ರಾಜ್ಯಗಳಲ್ಲಿಯೂ ಕಟ್ಟುನಿಟ್ಟಿನ ನಿಯಮಾವಳಿಗಳು ಜಾರಿಯಲ್ಲಿದ್ದು, ಖಾಸಗಿ ಸೇವೆಯನ್ನು ಸೀಮಿತಗೊಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸರ್ಕಾರವು ಗಂಭೀರವಾಗಿ ಪರಿಶೀಲಿಸಿ ಸಾರ್ವಜನಿಕರ ಆರೋಗ್ಯ, ರಕ್ಷಣೆ ಮತ್ತು ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟವನ್ನು ಇನ್ನಷ್ಟು ಬಲಪಡಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿರುವುದರಿಂದ, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ (IPD) ಚಿಕಿತ್ಸೆ ನೀಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ನಿಯಮಿತ ಸರ್ಕಾರಿ ಕರ್ತವ್ಯಗಳ ಅವಧಿಯ ನಂತರ ಮತ್ತು ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಹೊರರೋಗಿ ವಿಭಾಗದಲ್ಲಿ (OPD) ಮಾತ್ರ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಅನುಮತಿಸಿದೆ. ಈ ಖಾಸಗಿ ಸೇವೆಯ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಘೋಷಿಸಬೇಕು. ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಸರ್ಕಾರಿ ವೈದ್ಯರ ವಿರುದ್ಧ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !