February 26, 2026
Thursday, February 26, 2026
spot_img

ಧಾರವಾಡದ ಕಿಚ್ಚಿಗೆ ಮಣಿದ ಸರ್ಕಾರ: 56 ಸಾವಿರ ಹುದ್ದೆಗಳ ಭರ್ತಿಗೆ ಸಂಪುಟ ಅಸ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ, ಇಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,000 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದೆ.

ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿದ್ದ ಒಳಮೀಸಲಾತಿ ಮತ್ತು ಮೀಸಲಾತಿ ಮಿತಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಸರ್ಕಾರ, ಕಾನೂನು ಸಂಘರ್ಷ ತಪ್ಪಿಸಲು ಮಧ್ಯಂತರ ದಾರಿಯನ್ನು ಕಂಡುಕೊಂಡಿದೆ.

ಸದ್ಯಕ್ಕೆ ಸುಪ್ರೀಂ ಕೋರ್ಟ್ ಮಿತಿಯಾದ 50% ಮೀರದಂತೆ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ 15% ಎಸ್‌ಸಿ (SC) ಮತ್ತು 3% ಎಸ್‌ಟಿ (ST) ಮೀಸಲಾತಿಯ ಅನ್ವಯವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಎಸ್‌ಸಿ ಒಳಮೀಸಲಾತಿಯನ್ನು 17% ಕ್ಕೆ ಏರಿಸಿ ತಕ್ಷಣ ನೇಮಕಾತಿ ಮಾಡುವುದು ಕಾನೂನುಬದ್ಧವಾಗಿ ಕಠಿಣವಾಗಿರುವುದರಿಂದ, ಹಳೇ ಪದ್ಧತಿಯಲ್ಲೇ ಮುಂದುವರಿಯಲು ಸರ್ಕಾರ ನಿರ್ಧರಿಸಿದೆ. ಆದರೆ, 17% ಜಾರಿಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ರಾಜ್ಯದಲ್ಲಿ ಒಟ್ಟು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಮೊದಲ ಹಂತವಾಗಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲು ಸಚಿವರು ಒಪ್ಪಿಗೆ ನೀಡಿದ್ದಾರೆ. ರಾಜ್ಯಪಾಲರು ಈಗಾಗಲೇ ಒಳಮೀಸಲಾತಿ ಬಿಲ್‌ಗೆ ಸಹಿ ಹಾಕಿರುವುದರಿಂದ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿಕೊಂಡು ಶೀಘ್ರವೇ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !