ಹೊಸದಿಗಂತ ಯಲ್ಲಾಪುರ:
ನಗರದಲ್ಲಿ ಶನಿವಾರ ನಡೆದ ಹಿಂದೂ ಮಹಿಳೆಯ ಕೊಲೆ ಪ್ರಕರಣ ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಇದನ್ನು ಖಂಡಿಸಿ ಭಾನುವಾರ ಯಲ್ಲಾಪುರ ಪಟ್ಟಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಬಸವೇಶ್ವರ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಜನರು ಪಾಲ್ಗೊಂಡು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು, “ಶಾಂತಿಯುತವಾಗಿದ್ದ ಯಲ್ಲಾಪುರದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಇದು ಸ್ಪಷ್ಟವಾಗಿ ‘ಲವ್ ಜಿಹಾದ್’ ಪ್ರಕರಣವಾಗಿದೆ. ಈ ಕೃತ್ಯ ಎಸಗಿದ ಆರೋಪಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ, ಆತ ಮಾಡಿದ ಅಪರಾಧ ಕ್ಷಮಿಸುವಂತದ್ದಲ್ಲ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಪ್ರಕರಣವನ್ನು ಕೇವಲ ಪ್ರೇಮ ವೈಫಲ್ಯವೆಂದು ಪರಿಗಣಿಸಿ ಸುಮ್ಮನಾಗಬಾರದು. ಇಂತಹ ಘಟನೆಗಳ ಮೂಲ ಕಾರಣಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಈ ದುರಂತದಿಂದ 10 ವರ್ಷದ ಮಗು ಅನಾಥನಾಗುವಂತಾಗಿದೆ. ಇದು ಕೇವಲ ಪೊಲೀಸರ ವೈಫಲ್ಯವಲ್ಲ, ಬದಲಾಗಿ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯ,” ಎಂದು ದೂರಿದರು.
ಮಹಿಳೆಯ ಹತ್ಯೆಯನ್ನು ಖಂಡಿಸಿ ಪಟ್ಟಣದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದರು. ಅಂಗಡಿ-ಮುಂಗಟ್ಟುಗಳು ದಿನವಿಡೀ ಮುಚ್ಚಲ್ಪಟ್ಟಿದ್ದವು. ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗೇಶ ಪತ್ತಾರ, ಪ್ರಸಾದ ಹೆಗಡೆ, ಪ್ರಮೋದ ಹೆಗಡೆ, ಎಸ್.ಎನ್. ಭಟ್ ಏಕಾನ್, ಉಮೇಶ್ ಭಾಗ್ವತ್, ಶಾಮಲಿ ಪಾಟಣಕರ್ ಸೇರಿದಂತೆ ಅನೇಕ ಗಣ್ಯರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.

