ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಕಬ್ಬಿನ ದರವನ್ನು ಪ್ರತಿ ಟನ್‌ಗೆ ₹3,300 ಎಂದು ನಿಗದಿ ಪಡಿಸಿರುವ ನಿರ್ಧಾರಕ್ಕೆ ಮುಧೋಳ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರು ಈ ದರವನ್ನು ತಳ್ಳಿಹಾಕಿ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟವನ್ನು ಉಗ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾವಿರಾರು ರೈತರು ಸೇರುವ ಮೂಲಕ ಭಾರೀ ಧರಣಿ ನಡೆಸಿದ್ದಾರೆ. “ನಮಗೆ ಈ ಬೆಲೆ ಸಾಕಾಗುವುದಿಲ್ಲ. ಸರ್ಕಾರ ರಿಕವರಿ ಆಧಾರದ ಮೇಲೆ ನಿಗದಿ ಮಾಡಿರುವ ದರ ರೈತರ ಮೇಲಿನ ಮಹಾ ಅನ್ಯಾಯ. ಕಬ್ಬು ಬೆಲೆ ಪ್ರತಿ ಟನ್‌ಗೆ ಕನಿಷ್ಠ ₹3,500 ಇರಲೇಬೇಕು” ಎಂದು ರೈತರು ಆಗ್ರಹಿಸಿದ್ದಾರೆ.
ರೈತರ ಪ್ರಕಾರ, ಸರ್ಕಾರದ ₹3,300 ದರ ನಿರ್ಧಾರವು ಕೇವಲ ತೋರಿಕೆಯ ಕ್ರಮವಾಗಿದ್ದು, ಇದರಲ್ಲೂ ಸರ್ಕಾರ ಮತ್ತು ಕಾರ್ಖಾನೆಗಳು 50-50 ಹಂಚಿಕೆ ಮಾಡುವುದರಿಂದ ರೈತರಿಗೆ ಯೋಗ್ಯ ಲಾಭ ಸಿಗುವುದಿಲ್ಲ. “ಇದು ಭಿಕ್ಷೆಯಂತಿದೆ. ನಮ್ಮ ಪರಿಶ್ರಮಕ್ಕೆ ತಕ್ಕ ಮೌಲ್ಯ ನೀಡದ ಈ ನಿರ್ಧಾರವನ್ನು ನಾವು ಯಾವುದೇ ರೀತಿಯಲ್ಲೂ ಒಪ್ಪುವುದಿಲ್ಲ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಧಾರವು ತಾತ್ಕಾಲಿಕ ಶಾಂತಿಯನ್ನು ತರಬಹುದಾದರೂ, ರೈತರ ಅಸಮಾಧಾನದಿಂದ ಮುಧೋಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಹೋರಾಟದ ಅಲೆ ಎದ್ದಿದೆ. ಸರ್ಕಾರವು ಬೇಡಿಕೆಗಳ ಕುರಿತು ಶೀಘ್ರ ಚರ್ಚೆ ನಡೆಸದಿದ್ದರೆ ಈ ಹೋರಾಟ ರಾಜ್ಯವ್ಯಾಪಿಯಾಗುವ ಸಾಧ್ಯತೆ ಇದೆ ಎಂದು ರೈತ ಸಂಘಟನೆಗಳು ಎಚ್ಚರಿಸುತ್ತಿವೆ.

