January20, 2026
Tuesday, January 20, 2026
spot_img

ಮೋದಿಗೆ ಗ್ರ್ಯಾಂಡ್ ವೆಲ್ ಕಮ್: ಎಸ್‌ಸಿಒ ಶೃಂಗಸಭೆಗೆ ತೆರಳುವ ಭಾರತದ ಪ್ರಧಾನಿಗೆ ಚೀನಾ ಆತ್ಮೀಯ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಗೆ ಭಾಗವಹಿಸಲು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ ಆ.31ರಂದು ಚೀನಾಗೆ ಪ್ರಯಾ ಬೆಳೆಸಲಿದ್ದಾರೆ.

ಈ ಮಧ್ಯೆ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಟಿಯಾಂಜಿನ್‌ಗೆ ಭೇಟಿ ನೀಡುತ್ತಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೀನಾ ಆತ್ಮೀಯ ಸ್ವಾಗತ ಕೋರಿದೆ.

ಈ ಕುರಿತು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಚೀನಾದ ವಿದೇಶಾಂಗ ಸಚಿಬವಾಲಯದ ವಕ್ತಾರ ಗುವೊ ಜಿಯಾಕುನ್‌, ‘ಚೀನಾಗೆ ಬರುತ್ತಿರುವ ಭಾರತದ ಪ್ರಧಾನಿ ಮೋದಿ ಅವರಿಗೆ ನಾವು ಆತ್ಮೀಯ ಸ್ವಾಗತ ಕೋರುತ್ತೇವೆ’ ಎಂದು ಹೇಳಿದ್ದಾರೆ.

ಭಾರತದೊಂದಿಗಿನ ಅಮೆರಿಕದ ಸುಂಕ ಸಮರದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರ ಚೀನಾ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

2020ರಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಗಲ್ವಾನ್‌ ಕಣಿವೆ ಸಂಘರ್ಷದ ಬಳಿಕ, ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ.

‘ಟಿಯಾಂಜಿನ್‌ ನಗರದಲ್ಲಿ ನಡೆಯುತ್ತಿರುವ ಶೃಂಗಸಭೆಯು, ಎಸ್‌ಸಿಒ ಸ್ಥಾಪನೆಯಾದ ಬಳಿಕ ನಡೆಯುತ್ತಿರುವ ಅತಿದೊಡ್ಡ ಶೃಂಗಸಭೆಯಾಗಿದೆ. ಈ ಸಭೆಗೆನಾವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಭಾರತ-ಚೀನಾ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುವ ನಿರೀಕ್ಷೆ ಇದೆ’ ಎಂದು ಗುವೊ ಜಿಯಾಕುನ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಪಕ್ಷಗಳ ಸಂಘಟಿತ ಪ್ರಯತ್ನದಿಂದ, ಟಿಯಾಂಜಿನ್ ಶೃಂಗಸಭೆಯು ಒಗ್ಗಟ್ಟು, ಸ್ನೇಹ ಮತ್ತು ಫಲಪ್ರದ ಫಲಿತಾಂಶಗಳ ಸಭೆಯಾಗಲಿದೆ. ಎಸ್‌ಸಿಒ ಹೆಚ್ಚಿನ ಒಗ್ಗಟ್ಟು, ಸಮನ್ವಯ, ಚೈತನ್ಯ ಮತ್ತು ಉತ್ಪಾದಕತೆಯನ್ನು ಒಳಗೊಂಡ ಉತ್ತಮ-ಗುಣಮಟ್ಟದ ಅಭಿವೃದ್ಧಿಯ ಹೊಸ ಹಂತವನ್ನು ಪ್ರವೇಶಿಸುತ್ತದೆ ಎಂದು ನಾವು ನಂಬುತ್ತೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ತಮ್ಮ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಸಹಕಾರದ ಮೂಲಕ ಪ್ರಾದೇಶಿಕ ಸ್ಥಿರತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಎಸ್‌ಸಿಒ ಕೂಟವನ್ನು 2001ರಲ್ಲಿ ಸ್ಥಾಪಿಸಲಾಯಿತು. ಈ ಬಣವು ಪ್ರಸ್ತುತ 10 ಸದಸ್ಯರನ್ನು ಒಳಗೊಂಡಿದೆ. ಬೆಲಾರಸ್, ಚೀನಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಈ ಕೂಟದ ಸದಸ್ಯ ರಾಷ್ಟ್ರಗಳಾಗಿವೆ.

Must Read