ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತುಹಾಕಲಾಗಿದೆ ಎಂಬ ದೂರಿಗೆ ಸಂಬಂಧಿಸಿ ಎಸ್‌ಐಟಿ ತನಿಖೆ ತೀವ್ರಗೊಂಡಿದ್ದು, ಎಲ್ಲರ ಚಿತ್ತ ಈಗ ನೇತ್ರಾವತಿ-ಅಜಿಕುರಿ ರಸ್ತೆ ಸಮೀಪದ ಪಾಯಿಂಟ್ ಮೇಲೆ ನೆಟ್ಟಿದೆ.
ಅನಾಮಿಕ ವ್ಯಕ್ತಿ ನೀಡಿದ ಮಾಹಿತಿಯಂತೆ ಪ್ರಥಮ ಹಂತದಲ್ಲಿ ಗುರುತಿಸಲಾಗಿರುವ 13 ಸ್ಥಳಗಳಲ್ಲಿ ಕೊನೆಯ ಇದಾಗಿದ್ದು, ಇಲ್ಲಿ ಬುಧವಾರ ಶೋಧ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ಇದಾದ ಬಳಿಕ ಎಸ್‌ಐಟಿನ ಒಂದು ಹಂತದ ತನಿಖೆ ಪೂರ್ಣಗೊಳ್ಳಲಿದೆ.
ಇದಾದ ಬಳಿಕ ಮುಂದೇನು ಎಂಬ ಪ್ರಶ್ನೆ ಕುತೂಹಲ ಕೆರಳಿಸಿದ್ದು, ಎಸ್‌ಐಟಿ ತನ್ನ ಮುಂದಿನ ನಡೆಯನ್ನು ಬಹಿರಂಗಗೊಳಿಸದ ಕಾರಣ ಪ್ರಕರಣ ಇನ್ನಷ್ಟು ಕುತೂಹಲನ್ನು ಕಾಯ್ದುಕೊಂಡಿದೆ.
ಜು.28ರಂದು ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಗಿತ್ತು. ದೂರುದಾರ ಗುರುತಿಸಿದ್ದ 13 ಸ್ಥಳಗಳ ಪೈಕಿ ಜು. 29ರಂದು 1,2, ಜು.30ರಂದು 3,4,5ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಜು.31ರಂದು 6ನೇ ಸ್ಥಳದಲ್ಲಿ ಕಳೇಬರೆದ ಕುರುಹು ಪತ್ತೆಯಾಗಿದ್ದವು. ಅದಾದ ಬಳಿಕ ಆ.1ರಂದು 7ಹಾಗೂ 8 ಆ.2ರಂದು 9 ಹಾಗೂ 10ನೇ ಸ್ಥಳದಲ್ಲಿ ಶೋಧಕಾರ್ಯ ನಡೆದಿತ್ತು. ಆ.3ರಂದು ಕಾರ್ಯಾಚರಣೆಗೆ ವಿರಾಮ ನೀಡಲಾಗಿದ್ದು, ಆ.4ರಂದು ಬೇರೆಯೇ ಸ್ಥಳದಲ್ಲಿ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಅಸ್ಥಿ ಪಂಜರದ ಅವಶೇಷಗಳು ಸಿಕ್ಕಿದ್ದವು. ಇದು ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೋ ವ್ಯಕ್ತಿಯ ಅಸ್ಥಿಪಂಜರವಾಗಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.