Sunday, January 11, 2026

ವಿಬಿ-ಜಿ ರಾಮ್ ಜಿ ಯೋಜನೆಯಿಂದ ಹೆಚ್ಚಿನ ಪ್ರಯೋಜನ: ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ

ಹೊಸದಿಗಂತ ವರದಿ, ಮಂಗಳೂರು:

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆಯೊಂದಿಗೆ ಅದರಲ್ಲಿ ಸಾಕಷ್ಟು ಅಂಶಗಳನ್ನು ಕೇಂದ್ರ ಸರ್ಕಾರ ಸೇರಿಸಿದ್ದು, ಇದರಿಂದ ಜನತೆಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಹೇಳಿದರು.

ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು ಬದಲಾವಣೆಯ ನೆಪದಲ್ಲಿ ಕಾಂಗ್ರೆಸ್ ವಿನಾ ಕಾರಣ ಸುಳ್ಳು ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್‌ನ ಸುಳ್ಳನು ಜಗಜ್ಜಾಹಿರು ಮಾಡಲು ಜ.15ರಿಂದ ಫೆ.25ರ ವರೆಗೆ ರಾಜ್ಯವ್ಯಾಪಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಆಜೀವಿಕಾ ಮಿಷನ್-ಗ್ರಾಮೀಣ(ವಿಬಿ-ಜಿ ರಾಮ್ ಜಿ) ಯೋಜನೆಯಾಗಿ ಬದಲಾಯಿಸಲಾಗಿದೆ. ಇದರಿಂದ ನಷ್ಟವೇನೂ ಆಗಿಲ್ಲ. ಬೇರೆ ವಿಷಯ ಸಿಗದ ಕಾರಣ ಕಾಂಗ್ರೆಸ್ ಇದೇ ವಿಷಯವನ್ನಿಟ್ಟುಕ್ಕೊಂಡು ಅಪಪ್ರಚಾರ ಸೃಷ್ಟಿಸುತ್ತಿದೆ. ಇದನ್ನು ಜನತೆ ನಂಬುವುದಿಲ್ಲ ಎಂದರು.

ಯೋಜನೆಗಳ ಹೆಸರು ಬದಲಾವಣೆಯಾಗುವುದು ಇದೇ ಮೊದಲೇನಲ್ಲ. ಹಿಂದೆ ನೆಹರೂ ರೋಜ್ ಗಾರ್ ಯೋಜನಾ ಎಂದಿದ್ದ ಹೆಸರನ್ನು ಕಾಂಗ್ರೆಸ್ ನವರೇ ಅವರ ಸರ್ಕಾರವಿದ್ದಾಗ ನರೇಗಾ ಎಂದು ಬದಲಾಯಿಸಿದ್ದರು. ಆಗ ಇಷ್ಟು ಸಿದ್ದಿಯಾಗಿರಲಿಲ್ಲ. 2016ರಲ್ಲಿ ಮನರೇಗಾ ಯೋಜನೆ ಬಂತು, ಈಗ 20 ವರ್ಷಗಳ ಬಳಿಕ ಅದರಲ್ಲಿ ಬದಲಾವಣೆ ತರಲಾಗಿದೆ, ವಿಬಿ ಜಿ ರಾಮ್ ಜಿ ಎನ್ನುವ ಹೆಸರು ಇರಿಸಿದ್ದು ನಮ್ಮ ಸರ್ಕಾರದ ಇಚ್ಛಾಶಕ್ತಿ ಎಂದರು.

125 ದಿನಗಳ ಕೂಲಿ
ಉದ್ಯೋಗದ ಖಾತರಿ ಈಗ 100ರಿಂದ 125 ದಿನಗಳಿಗೆ ಆಗಿದೆ. ಕೂಲಿ ಪಾವತಿ ಒಂದೇ ವಾರದಲ್ಲಿ ಆಗಲಿದೆ, ಹಲವು ರೀತಿಯ ಆಡಳಿತಾತ್ಮಕ ಸುಧಾರಣೆ ಮಾಡಲಾಗಿದೆ ಎಂದ ಅವರು ಗ್ರಾಮ ಪಂಚಾಯತಿಯೇ ಕೆಲಸದ ಆಯ್ಕೆ ಮಾಡಲಿದೆ ಹೊರತು ಇದು ಕೇಂದ್ರೀಕೃತವಲ್ಲ, ಕಾಂಗ್ರೆಸ್ ನಾಯಕರು ಕೇವಲ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ವಸಂತ ಪೂಜಾರಿ ಉಪಸ್ಥಿತರಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!