ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 70 ವರ್ಷಗಳಿಂದ ಮೇಯರ್ಗಳ ಆಡಳಿತ ಕಂಡಿದ್ದ ಬಿಬಿಎಂಪಿ ಇನ್ನು ಇತಿಹಾಸದ ಪುಟಗಳನ್ನು ಸೇರಿಕೊಳ್ಳಲಿದೆ. ಬೆಂಗಳೂರಿಗರ ಬಾಯಲ್ಲಿ ಇನ್ನು ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಎನ್ನುವ ಪದ ಹೊರಬರಲಿದೆ.
ಬೆಳೆಯುತ್ತಿರುವ ರಾಜಧಾನಿಯನ್ನು ಭಾಗಗಳಾಗಿ ವಿಂಗಡಿಸಿ ಆಡಳಿತ ನಡೆಸುವ ಗ್ರೇಟರ್ ಬೆಂಗಳೂರು ಅಥಾರಿಟಿ ಇಂದಿನಿಂದ ಜಾರಿಗೆ ಬರುತ್ತಿದ್ದು, ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಯಾಗುತ್ತಿದೆ. ಈಗಾಗಲೇ ಗ್ರೇಟರ್ ಬೆಂಗಳೂರು ಅಥಾರಿಟಿಯ ಜಾರಿಗೆ ಸಜ್ಜಾಗಿದ್ದ ಸರ್ಕಾರ, ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಮೇಯರ್ ಕೊಠಡಿಯನ್ನು ಬದಲಾಯಿಸಿದೆ. ಮೇಯರ್ಗಳ ಫೋಟೋ ತೆರವು ಮಾಡಲಾಗಿದೆ.
ಈಗಾಗಲೇ ಐಎಎಸ್, ಐಪಿಎಸ್ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯ ಸ್ವರೂಪಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಬಿಬಿಎಂಪಿಗೆ 16 ಐಎಎಸ್, 2 ಐಪಿಎಸ್ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಈಗ 15 ಐಎಎಸ್ ಹಾಗೂ 2 ಐಪಿಎಸ್ ವೃಂದದ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ, ಪದನಾಮಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ 73 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಜಿಬಿಎಗೆ ಸದಸ್ಯರಾಗಿ ಬೆಂಗಳೂರಿನ ಮೂವರು ಸಂಸದರು, ಬೆಂಗಳೂರು ವ್ಯಾಪ್ತಿಯ ಶಾಸಕರನ್ನು ನೇಮಿಸಲಾಗಿದೆ.
ಇತ್ತ ಈ ಹಿಂದೆ ವಲಯಗಳಾಗಿ ಇದ್ದ ಬಿಬಿಎಂಪಿಯನ್ನು ಜಿಬಿಎ ಅಡಿಯಲ್ಲಿ ಐದು ಭಾಗಗಳಾಗಿ ಗುರುತಿಸಲಾಗಿದ್ದು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ನಗರಗಳಾಗಿ ವಿಭಜಿಸಲಾಗಿದೆ. ಇತ್ತ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಬಿಬಿಎಂಪಿಯ ಬದಲು ಜಿಬಿಎ ಆಡಳಿತ ರಚಿಸಲು ತಯಾರಿ ನಡೆದಿದೆ.
ಯಲಹಂಕದ ಶಕ್ತಿಸೌಧದ ಸಮೀಪವಿರುವ ಮೂರು ಎಕರೆ ಪ್ರದೇಶದಲ್ಲಿ ಉತ್ತರ ಮಹಾನಗರ ಪಾಲಿಕೆ, ಬನಶಂಕರಿ ದೇವಾಲಯದ ಎದುರಿಗಿರುವ ಖಾಲಿ ಜಾಗದಲ್ಲಿ ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಎಂ.ಜಿ. ರಸ್ತೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್‌ನಲ್ಲಿ ಬೆಂಗಳೂರು ಪೂರ್ವ, ಗೋವಿಂದರಾಜನಗರದ ಕನಕ ಭವನದಲ್ಲಿ ಬೆಂಗಳೂರು ಪಶ್ಚಿಮ ಹಾಗೂ ಜಿಬಿಎ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇಂದಿನಿಂದ ಬಿಬಿಎಂಪಿಯ ಕೇಂದ್ರ ಕಚೇರಿ ಜಿಬಿಎ ಕೇಂದ್ರ ಕಚೇರಿಯಾಗಿ ಬದಲಾಗುತ್ತಿದ್ದು, ಸಿಎಂ, ಡಿಸಿಎಂಗೂ ಪ್ರತ್ಯೇಕ ಕೊಠಡಿಗಳು ನಿಗದಿಯಾಗುತ್ತಿವೆ.
ಸದ್ಯ ಸರ್ಕಾರದ ಅಧಿಕೃತ ಸೂಚನೆ ತನಕ 198 ವಾರ್ಡ್‌ಗಳು ಕಾರ್ಯನಿರ್ವಹಿಸಲಿವೆ. ಹೊಸ 5 ನಗರ ಪಾಲಿಕೆಗಳನ್ನು ಸರ್ಕಾರ ಅಧಿಸೂಚಿಸಿದರೂ, ಹಾಲಿ ಇರುವ ವಾರ್ಡ್‌ಗಳೇ ಮುಂದುವರೆಯಲಿವೆ. ಸದ್ಯ ಇಷ್ಟು ದಿನ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳಿಂದಲೇ ಆಳಲ್ಪಡುತ್ತಿದ್ದ ಬಿಬಿಎಂಪಿಯ ಬದಲು ಇದೀಗ ಜಿಬಿಎ ಅಸ್ತಿತ್ವಕ್ಕೆ ಬರುತ್ತಿದೆ.