ಹಸಿಮೆಣಸಿನಕಾಯಿ ಇಲ್ಲದೆ ದಕ್ಷಿಣ ಭಾರತದ ಅನೇಕ ಭಕ್ಷ್ಯಗಳು ಅಪೂರ್ಣವೇ ಸರಿ! ಆದರೆ ನಾವು ಖರೀದಿಸಿದ ಮೆಣಸಿನಕಾಯಿಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ, ಕೆಲವೊಮ್ಮೆ ಒಣಗುತ್ತವೆ. ಇಂತಹ ಸಮಸ್ಯೆ ಎದುರಾಗದಂತೆ ಒಂದು ತಿಂಗಳವರೆಗೆ ಹಸಿರು ಮೆಣಸಿನಕಾಯಿಗಳನ್ನು ತಾಜಾವಾಗಿಡಲು ಕೆಲವು ಸರಳ ಉಪಾಯಗಳನ್ನು ಅನುಸರಿಸಬಹುದು.
- ತೊಟ್ಟು ಅಥವಾ ಕಾಂಡ ತೆಗೆದುಹಾಕಿ: ಹಸಿರು ಮೆಣಸಿನಕಾಯಿಯ ತೊಟ್ಟು ಅಥವಾ ಕಾಂಡವನ್ನು ತೆಗೆದಿಲ್ಲದಿದ್ದರೆ ಅದು ಬೇಗನೆ ಹಾಳಾಗುತ್ತದೆ. ಕಾಂಡದಲ್ಲೇ ತೇವಾಂಶ ಹೆಚ್ಚಾಗಿ ಕಾಯಿ ಕೊಳೆಯಲು ಕಾರಣವಾಗುತ್ತದೆ. ಆದ್ದರಿಂದ ಮೊದಲು ಕಾಂಡವನ್ನು ತೆಗೆದು, ತೊಳೆದು, ಒಣಗಿಸಿ ನಂತರ ಫ್ರಿಜ್‌ನಲ್ಲಿ ಇಡಬೇಕು.
- ಜಿಪ್‌ಲಾಕ್ ಬ್ಯಾಗ್ ಬಳಸಿ: ಒಂದು ತಿಂಗಳವರೆಗೆ ಮೆಣಸಿನಕಾಯಿಗಳನ್ನು ತಾಜಾವಾಗಿಡಬೇಕೆಂದರೆ ಜಿಪ್‌ಲಾಕ್ ಬ್ಯಾಗ್ ಅತ್ಯುತ್ತಮ ಆಯ್ಕೆ. ಮೊದಲು ಮೆಣಸಿನಕಾಯಿಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇಟ್ಟು ಫ್ರಿಜ್‌ನ ತರಕಾರಿ ಟ್ರೇಯಲ್ಲಿ ಸಂಗ್ರಹಿಸಿ.
- ಪೇಪರ್ ಅಥವಾ ಬಟ್ಟೆ ಬಳಸಿ: ನಿಮ್ಮ ಬಳಿ ಜಿಪ್‌ಲಾಕ್ ಬ್ಯಾಗ್ ಇಲ್ಲದಿದ್ದರೂ ಚಿಂತಿಸಬೇಕಿಲ್ಲ. ಬದಲಿಗೆ ಹಳೆಯ ವೃತ್ತಪತ್ರಿಕೆ ಅಥವಾ ಸ್ವಚ್ಛವಾದ ಬಟ್ಟೆಯಲ್ಲಿ ಮೆಣಸಿನಕಾಯಿಗಳನ್ನು ಸುತ್ತಿ ಫ್ರಿಜ್‌ನ ಬಾಗಿಲಲ್ಲಿ ಇಡಿ. ಬಟ್ಟೆಯಲ್ಲಿ ಸುತ್ತಿದರೆ ತೇವಾಂಶ ಶೋಷಿಸಿಕೊಂಡು ಹಸಿಮೆಣಸಿನಕಾಯಿಗಳು ತಾಜಾ ಉಳಿಯುತ್ತವೆ.
- ತೇವಾಂಶ ರಹಿತ ಡಬ್ಬಿ ಬಳಸಿ: ಮೆಣಸಿನಕಾಯಿಗಳನ್ನು ಡಬ್ಬಿಯಲ್ಲಿ ಇಡುತ್ತಿದ್ದರೆ ಅದು ಸಂಪೂರ್ಣ ಒಣಗಿರಬೇಕು. ಪ್ಲಾಸ್ಟಿಕ್ ಅಥವಾ ಸ್ಟೀಲ್ ಡಬ್ಬಿಯಾದರೂ ಪರವಾಗಿಲ್ಲ, ಆದರೆ ತೇವಾಂಶ ಇದ್ದರೆ ಕಾಯಿಗಳು ಬೇಗನೆ ಕೊಳೆಯುತ್ತವೆ. ಆದ್ದರಿಂದ ಸಂಗ್ರಹಿಸುವ ಮೊದಲು ಪಾತ್ರೆ ಸಂಪೂರ್ಣ ಒಣಗಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಮಾಗಿದ ಮೆಣಸಿನಕಾಯಿ ತರಬೇಡಿ: ಮಾರುಕಟ್ಟೆಯಲ್ಲಿ ಮಾಗಿದ ಅಥವಾ ಹಳದಿ ಬಣ್ಣ ತಾಳಿರುವ ಮೆಣಸಿನಕಾಯಿಗಳನ್ನು ಖರೀದಿಸಬೇಡಿ. ಇವು ಬೇಗನೆ ಹಾಳಾಗುತ್ತವೆ. ತಾಜಾ, ಹಸಿರಾದ ಮೆಣಸಿನಕಾಯಿಗಳನ್ನು ಆರಿಸಿ.

