Sunday, December 14, 2025

ಚಿನ್ನಸ್ವಾಮಿ ಮೈದಾನಕ್ಕೆ ‘ಗ್ರೀನ್ ಸಿಗ್ನಲ್’: ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯಗಳು ಖಚಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿಯಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಂತಸದ ಸುದ್ದಿ ಬಂದಿದೆ. ಕಳೆದ ವರ್ಷದ ದುರಂತದ ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಮೇಲಿದ್ದ ನಿಷೇಧವನ್ನು ತೆರವುಗೊಳಿಸುವಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಇದರೊಂದಿಗೆ, ಮುಂಬರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುವುದು ಖಚಿತವಾಗಿದೆ.

ಕಳೆದ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದಾಗಿ 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಅಹಿತಕರ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.

ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿ ಲೋಪಗಳು ಕಂಡುಬಂದಿದ್ದವು. ಈ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದನ್ನು ನಿಲ್ಲಿಸಿತ್ತು. ಜೊತೆಗೆ, ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗವು ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಹಲವು ಪ್ರಮುಖ ಸಲಹೆಗಳನ್ನು ಶಿಫಾರಸ್ಸು ಮಾಡಿತ್ತು.

ಸದ್ಯ ಕೆಎಸ್‌ಸಿಎಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿಯು, ಸರ್ಕಾರ ಮತ್ತು ತನಿಖಾ ಆಯೋಗ ಸೂಚಿಸಿದ ಭದ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಿದ್ಧತೆಗಳನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ಈ ಬದ್ಧತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೂ ಚಿನ್ನಸ್ವಾಮಿ ಸ್ಟೇಡಿಯಂಗೆ ಪಂದ್ಯಗಳನ್ನು ಆಯೋಜಿಸಲು ಗ್ರೀನ್ ಸಿಗ್ನಲ್ ಲಭಿಸಿದೆ.

ಆರ್​ಸಿಬಿ ಮೂಲಗಳ ಪ್ರಕಾರ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವಾಡಲು ಅನುಮತಿ ಸಿಕ್ಕಿರುವುದರಿಂದ, ಮಾರ್ಚ್‌ನಿಂದ ಆರಂಭವಾಗಲಿರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ.

ಈ ಅನುಮತಿ ದೊರೆತ ಬೆನ್ನಲ್ಲೇ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್ ಮರಳಲಿದೆ. ಮುಂಬರುವ ವಿಜಯ್ ಹಜಾರೆ ಟೂರ್ನಿಯ ಕೆಲವು ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಉತ್ಸುಕವಾಗಿದೆ. ಈ ಮೂಲಕ ಸ್ಟೇಡಿಯಂ ಅನ್ನು ಪಂದ್ಯಗಳಿಗೆ ಸಜ್ಜುಗೊಳಿಸಲಾಗುತ್ತಿದೆ.

ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಐಪಿಎಲ್ ಸೀಸನ್-19ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನದಲ್ಲೇ ಕಣಕ್ಕಿಳಿಯುವುದು ಖಚಿತವಾಗಿದೆ.

error: Content is protected !!