ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿಲ್ಲ. ಇದು ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡದೇ ಇರೋದು ಇಂದು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನೂ ಬೆಳಗಾವಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದು, ಗೃಹ ಲಕ್ಷ್ಮಿ ಹಣ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಯಾವ ಲಕ್ಷ್ಮಿ ಮನೆಗೆ ಐದು ಸಾವಿರ ಕೋಟಿ ಹಣ ಹೋಗಿದೆ ಎಂದು ಸರ್ಕಾರ ಹೇಳಲಿ. ಬಿಜೆಪಿ ಇಂದಿನಿಂದಲೇ ಈ ಸಂಬಂಧ ಹೋರಾಟ ನಡೆಸಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಗೃಹಲಕ್ಷ್ಮಿ ಹಣ ಕೊಡುತ್ತಿದ್ದಾರೋ ಬಿಡುತ್ತಿದ್ದಾರೋ ಗೊತ್ತಿಲ್ಲ. ಸರ್ಕಾರ ಬಂದ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆದಿದೆ. ಅದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. 2800 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕೊಟ್ಟು ರೈತರ ಪರಿಸ್ಥಿತಿ ಎಲ್ಲಿಗೆ ತಂದಿಟ್ಟಿದ್ದಾರೆ? ಸಹಕಾರಿ ಬ್ಯಾಂಕುಗಳಲ್ಲಿ 32 ಲಕ್ಷ ಕುಟುಂಬಕ್ಕೆ 22 ಕೋಟಿ ಸಾಲ ಕೊಡ್ತಿವಿ ಅಂದ್ರು ಎಲ್ಲಿ ಕೊಟ್ಟರು? ಹೊಸದಾಗಿ ಸಾಲ ಕೊಟ್ಟಿಲ್ಲ ಇವರು. ರೈತರ ಪರಿಸ್ಥಿತಿ ಏನಾಗಬೇಕು? ನನ್ನ ಚಿಂತೆ ಇದು. ಗೃಹಲಕ್ಷ್ಮಿ ಹಣ ಒಟ್ಟಿಗೆ ಚುನಾವಣೆ ಬಂದಾಗ ಕೊಡ್ತಾರೆ. ಒಟ್ಟಿಗೆ ಕೊಟ್ಟಾಗ ಮಾತ್ರ ಜನ ನೆನಪು ಇಟ್ಟಿಕೊಳ್ತಾರೆ ಇವರನ್ನ. ಮೂರು ತಿಂಗಳಿಗೆ ಒಮ್ಮೆ ಕೊಡುತ್ತಾರೆ, ಆಗ ಓಟ್ ಹಾಕ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೂರು ತಿಂಗಳಿಂದ ಬಾರದ ಗೃಹಲಕ್ಷ್ಮಿ ಯೋಜನೆ ಹಣ! ಫಲಾನುಭವಿಗಳು ಕಂಗಾಲು

