ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯದಲ್ಲಿ ಮಾನವನ ಓಡಾಟ, ರೆಸಾರ್ಟ್ ಮತ್ತು ಸಫಾರಿಯಂತಹ ಕ್ರಿಯೆಗಳಿಂದಾಗಿ ಕಾಡು ಪ್ರಾಣಿಗಳ ದಾಳಿ ಹೆಚ್ಚಳವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕಾಡಿನಲ್ಲಿ ಜನರ ಚಟುವಟಿಕೆಯಿಂದ ಪ್ರಾಣಿಗಳು ಆಹಾರ-ನೀರು ಅರಸಿ ನಾಡಿಗೆ ಬರುತ್ತಿರುವುದರಿಂದ ಮಾನವನ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಮೈಸೂರಿನಲ್ಲಿ ಹುಲಿ ದಾಳಿ ಸಂಬಂಧ ನಿನ್ನೆ ಅರಣ್ಯ ಸಚಿವರು ಸಭೆ ನಡೆಸಿದ್ದಾರೆ. ತಾವು ಸಹ ಶೀಘ್ರವೇ ಈ ಕುರಿತು ಸಭೆ ನಡೆಸುವುದಾಗಿ ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರ ಸಫಾರಿಗಳ ಸಂಖ್ಯೆ ಕಡಿಮೆ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ಸಂಪುಟ ಪುನಾರಚನೆ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲಾಗುವುದು. ಬಿಹಾರ ಚುನಾವಣೆ ಪ್ರಚಾರಕ್ಕೆ ಕರೆ ಬಂದರೆ, ಅಗತ್ಯವಾಗಿ ತೆರಳುವುದಾಗಿ ತಿಳಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿರುವ ಹಲವು ಸಾಧಕರನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಯನ್ನು ಗಮನದಲ್ಲಿರಿಸಿ ಪ್ರತಿ ಜಿಲ್ಲೆಯಲ್ಲೂ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಅವರು ಹೇಳಿದರು.

