Sunday, November 9, 2025

ಜಿಎಸ್‌ಟಿ ಉಳಿತಾಯ ಉತ್ಸವದ ಸಂಭ್ರಮ: ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಎಸ್‌ಟಿ 2.0 ಸುಧಾರಣೆಗಳು ದೇಶದ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಿದ್ದು, ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ಗ್ರಾಹಕ ವಸ್ತುಗಳಂತಹ ಪ್ರಮುಖ ವಲಯಗಳಲ್ಲಿ ದಾಖಲೆಯ ಮಾರಾಟಕ್ಕೆ ಕಾರಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಜಿಎಸ್‌ಟಿ ಉಳಿತಾಯ ಉತ್ಸವದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜಿಎಸ್‌ಟಿ 2.0 (GST 2.0) ರಿಪೋರ್ಟ್‌ ಕಾರ್ಡನ್ನು ಜನರ ಮುಂದಿಟ್ಟ ಅವರು, ಪ್ರಧಾನಿ ಮೋದಿ ಅವರ ದೀಪಾವಳಿ ಉಡುಗೊರೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು.

ಸರ್ಕಾರವು ದಿನನಿತ್ಯ ಬಳಸುವ 54 ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅವುಗಳಲ್ಲಿ ಪ್ರತಿಯೊಂದರಲ್ಲೂ ಜಿಎಸ್‌ಟಿ ಸುಧಾರಣೆಗಳಿಂದಾಗಿ ತೆರಿಗೆ ಪ್ರಯೋಜನವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಧಾನ ಮಂತ್ರಿಯವರ ದೀಪಾವಳಿ ಉಡುಗೊರೆಯನ್ನು ತಲುಪಿಸಲಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳಿಂದ ಉಂಟಾದ ಜಿಯೋಪಾಲಿಟಿಕಲ್ ಅಸ್ಥಿರತೆಯ ನಡುವೆಯೂ ಭಾರತ ತನ್ನ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದರು.

ಅಮೆರಿಕ ಭಾರತಕ್ಕೆ 50% ತೆರಿಗೆ ವಿಧಿಸಿದರೂ, ಭಾರತದ ಆಂತರಿಕ ಆರ್ಥಿಕ ಚಟುವಟಿಕೆಗಳು ಬಲವಾದ ಸ್ಥಿತಿಯಲ್ಲಿ ಮುಂದುವರಿದಿವೆ. ಹಾಗಾಗಿಯೇ, ಜಿಎಸ್‌ಟಿ ದರ ಕಡಿತದಿಂದ ಸಾಮಾನ್ಯ ಜನರಿಗೆ ನೇರ ಪ್ರಯೋಜನ ತಲುಪಿದೆ ಎಂದರು.

ಸೀತಾರಾಮನ್ ಅವರ ಪ್ರಕಾರ, ಜಿಎಸ್‌ಟಿ ದರ ಕಡಿತದಿಂದ ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ದಾಖಲೆಮಟ್ಟದ ಮಾರಾಟ ದಾಖಲಾಗಿದ್ದು, ಅದ್ರಂತೆ, ಮೂರು ಚಕ್ರ ವಾಹನಗಳ ಮಾರಾಟ ವರ್ಷದಿಂದ ವರ್ಷಕ್ಕೆ 5.5% ಹೆಚ್ಚಾಗಿದೆ. ಜೊತೆಗೆ ಎರಡು ಚಕ್ರ ವಾಹನಗಳ ಮಾರಾಟವು 21.6 ಲಕ್ಷ ಯೂನಿಟ್ಗಳಿಗೆ ತಲುಪಿದೆ. ಇದರೊಂದಿಗೆ ಇತರೆ ಪ್ಯಾಸೆಂಜರ್ ವಾಹನಗಳ ಡಿಸ್ಪ್ಯಾಚ್ 3.72 ಲಕ್ಷಕ್ಕೆ ಏರಿಕೆಯಾಗಿದ್ದು, ಈ ವೇಳೆ ಹೀರೋ ಮೋಟರ್ಸ್ ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಮಾಸಿಕ ಮಾರಾಟ ಸಾಧಿಸಿದೆ ಎಂದರು.

ಜಿಎಸ್‌ಟಿ ಪರಿಷ್ಕರಣೆ 2025ರ ಸೆಪ್ಟೆಂಬರ್ 22ರಂದು ನವರಾತ್ರಿ ಆರಂಭದಂದು ಜಾರಿಯಾದ ನಂತರ ಮೊದಲ ದಿನದಲ್ಲೇ ಏರ್‌ಕಂಡೀಷನರ್ (AC) ಮಾರಾಟ ದ್ವಿಗುಣವಾಗಿದ್ದು, ಟಿವಿ ಮಾರಾಟವು 30-35% ಹೆಚ್ಚಾಗಿದೆ. ಗ್ರಾಹಕರ ಖರೀದಿಶಕ್ತಿಯಲ್ಲಿ ಏರಿಕೆ ಕಂಡುಬಂದಿದ್ದು, ಜನರು ಹೆಚ್ಚು ಖರ್ಚು ಮಾಡಲು ಪ್ರಾರಂಭಿಸಿದ್ದಾರೆ ಎಂದು ಸೀತಾರಾಮನ್ ಹೇಳಿದರು.

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ವರ್ಷದ ನವರಾತ್ರಿ ಉತ್ಸವದಲ್ಲಿ ದಾಖಲೆಯ ಮಾರಾಟ ನಡೆದಿದೆ. ಹಿಂದಿನ ನವರಾತ್ರಿ ಉತ್ಸವದಲ್ಲಿ ದಾಖಲಾದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ನವರಾತ್ರಿ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಶೇ.25 ರಷ್ಟು ಹೆಚ್ಚಳವಾಗಿದೆ. ಜಿಎಸ್ಟಿ ಸುಧಾರಣೆಗಳಿಂದಾಗಿ ಆಹಾರದ ಬೆಲೆಗಳು ಕಡಿಮೆಯಾಗುತ್ತಿವೆ. ಎಲೆಕ್ಟ್ರಾನಿಕ್ಸ್‌ಗೆ ಹೆಚ್ಚುತ್ತಿರುವ ಬೇಡಿಕೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತಿದೆ ಎಂದು ವಿವರಿಸಿದ್ದಾರೆ.

ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ನವರಾತ್ರಿ ಸಮಯದಲ್ಲಿ ವಾಹನ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ” ಎಂದರು. ಇದರೊಂದಿಗೆ ಮಾರುತಿ ಸುಜುಕಿ ಕಂಪನಿಯು ಮೊದಲ 8 ದಿನಗಳಲ್ಲಿ 1.65 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಕಂಪನಿಯ ಮಾರಾಟ 60% ಏರಿಕೆಯಾಗಿದೆ ಮತ್ತು ಟಾಟಾ ಕಂಪನಿಯು 50,000ಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದರು.

ಈ ಜಿಎಸ್‌ಟಿ ಪರಿಷ್ಕರಣೆ ಭಾರತ ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಆರ್ಥಿಕ ಸುಧಾರಣೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಾರ ನೀತಿಗಳ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕ ವೇಗ ಸ್ಥಿರವಾಗಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ಭಾರತದ ವೃದ್ಧಿ ಅಂದಾಜನ್ನು 6.6%ಕ್ಕೆ ಹೆಚ್ಚಿಸಲು ಸಹಾಯವಾಯಿತು ಎಂದು ತಿಳಿಸಿದರು.

error: Content is protected !!