ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು (GST) ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದಾಗಿ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬರಲಿದೆ.
ಆದರೆ ಹಲವು ವಸ್ತುಗಳು ದುಬಾರಿಯಾಗಲಿವೆ. ಈ ಸಾಲಿಗೆ ಈ ಬಾರಿಯ ಐಪಿಎಲ್ ಟಿಕೆಟ್ ಕೂಡ ಸೇರ್ಪಡೆಯಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ ಮಾಡಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್ ಜಿಎಸ್‌ಟಿ ತೆರಿಗೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ.
ಆದರೆ ಇದೇ ವೇಳೆ ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಹೆಚ್ಚಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ ಇನ್ಮುಂದೆ ಐಪಿಎಲ್ ಟಿಕೆಟ್ ಮೇಲೆ ಶೇ.12 ರಷ್ಟು ಜಿಎಸ್‌ಟಿ ದರ ಹೆಚ್ಚಾಗಲಿದೆ.
ಈ ಹಿಂದೆ, 1000 ರೂ. ಮೌಲ್ಯದ ಐಪಿಎಲ್ ಟಿಕೆಟ್‌ಗಳ ಮೇಲೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದರಿಂದಾಗಿ ಟಿಕೆಟ್‌ನ ಒಟ್ಟು ಬೆಲೆ 1280 ರೂ.ಗಳಾಗುತ್ತಿದ್ದರು. ಇದೀಗ ಐಪಿಎಲ್ ಟಿಕೆಟ್‌ಗಳ ಮೇಲೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಿದ್ದಾರೆ ಎಂದು ವರದಿಯಾಗಿದೆ.
ಅದರಂತೆ ಮುಂದಿನ ಸೀಸನ್ ಐಪಿಎಲ್ ವೇಳೆ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ. ಅಂದರೆ 1000 ರೂ. ಟಿಕೆಟ್ ಖರೀದಿಸಿದರೆ, ಅದರ ಮೇಲೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಿಂದ 1000 ರೂ. ಟಿಕೆಟ್ ದರವು 1400 ರೂ. ಆಗಲಿದೆ ಎಂದು ವರದಿಯಾಗಿದೆ.
ಇದೇ ರೀತಿ ಅತೀ ಕಡಿಮೆ ಟಿಕೆಟ್ ದರವಾಗಿರುವ 500 ರೂ.ಗಳ ಟಿಕೆಟ್‌ನ ಹೊಸ ಬೆಲೆಯು 700 ರೂ. ಆಗಲಿದೆ. ಇದಕ್ಕೂ ಮುನ್ನ 500 ರೂ. ಟಿಕೆಟ್ ದರವು ಜಿಎಸ್‌ಟಿ ಸೇರಿ 640 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು 2000 ರೂ.ಗಳ ಟಿಕೆಟ್ಗೆ 2560 ರೂ.ಗಳ ಬದಲಿಗೆ 2800 ರೂ.ಗಳನ್ನು ಪಾವತಿಸಬೇಕಾಗುತ್ತದೆ.