ಸೀಬೆ ಹಣ್ಣು (Guava) ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುವ ಒಂದು ಪೌಷ್ಠಿಕ ಹಣ್ಣು. ವಿಟಮಿನ್ ಸಿ, ಫೈಬರ್, ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ಸ್‌ಗಳಿಂದ ಕೂಡಿರುವ ಈ ಹಣ್ಣು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಪಚನ ಕ್ರಿಯೆಗೂ ಸಹಕಾರಿ. ಆದರೆ ಎಲ್ಲರಿಗೂ ಇದು ಸೂಕ್ತವಲ್ಲ. ಕೆಲವರಿಗೆ ಸೀಬೆ ಹಣ್ಣಿನ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ಹಣ್ಣನ್ನು ತಿನ್ನುವಾಗ ಎಚ್ಚರಿಕೆ ಅಗತ್ಯ.
ಹೊಟ್ಟೆ ಉಬ್ಬರ ಇರುವವರು
ಸೀಬೆಕಾಯಿಯಲ್ಲಿ ಫ್ರಕ್ಟೋಸ್ ಮತ್ತು ವಿಟಮಿನ್ ಸಿ ಅಧಿಕವಾಗಿರುವುದರಿಂದ ಅತಿಯಾಗಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸಬಹುದು. ಪಚನ ಕ್ರಿಯೆಯಲ್ಲೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಸೀಬೆ ತಿನ್ನುವುದನ್ನು ತಪ್ಪಿಸಿಕೊಳ್ಳುವುದು ಉತ್ತಮ.

ಮಧುಮೇಹ ರೋಗಿಗಳು
ಸೀಬೆ ಹಣ್ಣಿಗೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವಿದ್ದರೂ, ಮಧುಮೇಹ ಇರುವವರು ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಮಿತವಾದ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ಐಬಿಎಸ್ (IBS) ಇರುವವರು
ಸೀಬೆ ಹಣ್ಣಿನಲ್ಲಿ ಫೈಬರ್ ಹೆಚ್ಚಿರುವುದರಿಂದ ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಇರುವವರಿಗೆ ಇದರಿಂದ ಗಂಭೀರ ಪರಿಣಾಮ ಉಂಟಾಗಬಹುದು. ಆದ್ದರಿಂದ ಐಬಿಎಸ್ ರೋಗಿಗಳು ಸೀಬೆಕಾಯಿ ತಿನ್ನುವುದನ್ನು ತಪ್ಪಿಸಬೇಕು.

ಎಸ್ಜಿಮಾ ರೋಗಿಗಳು
ಸೀಬೆ ಹಣ್ಣು ಹಾಗೂ ಅದರ ಎಲೆಗಳಲ್ಲಿ ಇರುವ ಕೆಲ ರಾಸಾಯನಿಕ ಅಂಶಗಳು ಚರ್ಮದಲ್ಲಿ ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ಎಸ್ಜಿಮಾ ಸಮಸ್ಯೆ ತೀವ್ರವಾಗಿರುವವರು ಈ ಹಣ್ಣಿನ ಸೇವನೆ ತಪ್ಪಿಸುವುದು ಒಳಿತು.