March 17, 2026
Tuesday, March 17, 2026
spot_img

ಹೊಟೇಲ್ ಗ್ರಾಹಕರ ಮೇಲೆ‌ ಕೊಲ್ಲಿ ಯುದ್ಧದ ಏಟು: ಮತ್ತೆ ಇಳಿದೀತೇ ‘ಹೇರಿಕೆ’ಯಾದ ತಿಂಡಿ ರೇಟು?

ಸುದೀಪ್ ರಾಜ್ ಸುಳ್ಯ


ಹೊಸದಿಗಂತ ​ಉಡುಪಿ:

ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಹಾಗೂ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕರಾವಳಿಯ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಅನಿಲ ಅಭಾವದಿಂದಾಗಿ ಕೆಲವು ಹೋಟೆಲ್ ತಿಂಡಿ ಮತ್ತು ಊಟದ ದರಗಳಲ್ಲಿ 10 ರಿಂದ 30 ರೂಪಾಯಿಯಷ್ಟು ದಿಢೀರ್ ಏರಿಕೆಯಾಗಿದ್ದು, ಒಂದು ವೇಳೆ ಅನಿಲ ಪೂರೈಕೆ ಯಥಾಸ್ಥಿತಿಗೆ ಮರಳಿದರೂ ಸಹ ಏರಿಕೆಯಾದ ಈ ದರ ಮತ್ತೆ ಇಳಿಕೆಯಾಗುವುದೇ ಎನ್ನುವ ಯಕ್ಷಪ್ರಶ್ನೆ ಈಗ ಗ್ರಾಹಕರನ್ನು ಕಾಡತೊಡಗಿದೆ.

​ಸಾಮಾನ್ಯವಾಗಿ ಒಮ್ಮೆ ಏರಿಕೆಯಾದ ಹೊಟೇಲ್ ದರಗಳು ಅಲ್ಪಾವಧಿಯಲ್ಲಿ ಇಳಿಕೆಯಾದ ಇತಿಹಾಸವಿಲ್ಲ. ಈಗಿನ ತಾತ್ಕಾಲಿಕ ಅನಿಲ ಅಭಾವವನ್ನು ಮುಂದಿಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆಯಾದರೂ, ಮುಂದೆ ಗ್ಯಾಸ್ ಲಭ್ಯತೆ ಸುಗಮವಾದ ಬಳಿಕವೂ ಹೊಟೇಲ್ ಮಾಲೀಕರು ಹಳೆಯ ದರವನ್ನೇ ಮುಂದುವರಿಸುತ್ತಾರೋ ಅಥವಾ ಇಳಿಕೆ ಮಾಡುತ್ತಾರೋ ಎಂಬುದು ಸದ್ಯದ ಕುತೂಹಲ.

ಈ ದರ ಏರಿಕೆಯು ಸಾಮಾನ್ಯ ಮಧ್ಯಮ ವರ್ಗದ ಜನರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತಿದೆ.


​ಅಡುಗೆ ಮನೆಗಳಿಗೆ ಯುದ್ಧದ ಬಿಸಿ:
ಮದ್ಯಪ್ರಾಚ್ಯದ ಸಂಘರ್ಷದ ಕಾರಣದಿಂದಾಗಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಕಾಣಿಸಿಕೊಂಡಿದೆ. ಗ್ಯಾಸ್ ಸಿಗದೆ ಕಂಗಾಲಾದ ಹೊಟೇಲ್ ಮಾಲೀಕರು ಅನಿವಾರ್ಯವಾಗಿ ಸೌದೆ ಒಲೆ ಮತ್ತು ಎಲೆಕ್ಟ್ರಿಕ್ ಸ್ಟವ್‌ಗಳ ಮೊರೆ ಹೋಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಟ್ಟಿಗೆಯ ದರವೂ ದುಬಾರಿಯಾಗಿದ್ದು, ಜೊತೆಗೆ ವಿದ್ಯುತ್ ವೆಚ್ಚವೂ ಹೆಚ್ಚುತ್ತಿರುವುದರಿಂದ ಅಡುಗೆ ತಯಾರಿಕಾ ವೆಚ್ಚ ಗಗನಕ್ಕೇರಿದೆ. ಈ ವೆಚ್ಚವನ್ನು ಸರಿದೂಗಿಸಲು ಹೋಟೆಲ್ ತಿಂಡಿಗಳ ಮೇಲೆ 10 ರೂ.ನಿಂದ 30 ರೂ.ವರೆಗೆ ಹೆಚ್ಚುವರಿ ಹೊರೆ ಹೇರಲಾಗಿದೆ.

​ಜಿಲ್ಲೆಯಲ್ಲಿ ಈಗಾಗಲೇ ಎಲ್ ಪಿಜಿ ಗ್ಯಾಸ್ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷ ಹಾಗೂ 45 ದಿನಗಳ ವಿಚಿತ್ರ ನಿಯಮದಿಂದಾಗಿ ಗ್ರಾಹಕರು ಹೈರಾಣಾಗಿದ್ದಾರೆ. ಇದರ ನಡುವೆ ಹೊಟೇಲ್ ದರ ಏರಿಕೆಯು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರ್ಯಾಯ ಇಂಧನಗಳ ಬಳಕೆಯೂ ದುಬಾರಿಯಾಗಿರುವುದರಿಂದ ಹೊಟೇಲ್ ಉದ್ಯಮದ ಮೇಲೆ ಯುದ್ಧದ ಬಿಸಿ ನೇರವಾಗಿ ತಟ್ಟುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !