ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಮತ್ತಷ್ಟು ತೀವ್ರಗೊಂಡಿರುವ ನಡುವೆ, ಕಿಶ್ತ್ವಾರ್ ಜಿಲ್ಲೆಯ ಮೇಲ್ಭಾಗದ ಅರಣ್ಯದಲ್ಲಿ ಭಾನುವಾರ ಭದ್ರತಾ ಪಡೆಗಳು ಉಗ್ರರೊಂದಿಗೆ ಮುಖಾಮುಖಿಯಾಗಿವೆ. ಹಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಎಂಟು ಸೈನಿಕರು ಗಾಯಗೊಂಡಿದ್ದು, ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ, ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರು ಸಂಯುಕ್ತವಾಗಿ ಶೋಧ ನಡೆಸುತ್ತಿದ್ದ ವೇಳೆ, ಚಟ್ರೂ ಪ್ರದೇಶದ ಈಶಾನ್ಯ ಭಾಗದ ಸೊನ್ನಾರ್ ಎಂಬ ಸಾಮಾನ್ಯ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ. ‘ಆಪರೇಷನ್ ಟ್ರಾಶಿ–I’ ಎಂಬ ಹೆಸರಿನ ಈ ಕಾರ್ಯಾಚರಣೆ ಭಾನುವಾರ ಮಧ್ಯಾಹ್ನ ಆರಂಭವಾಗಿತ್ತು.
ಅಧಿಕಾರಿಗಳ ಮಾಹಿತಿಯಂತೆ, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿರಬಹುದು ಎನ್ನಲಾದ ಎರಡು ಅಥವಾ ಮೂರು ವಿದೇಶಿ ಉಗ್ರರು ಭದ್ರತಾ ಪಡೆಗಳ ಮೇಲೆ ಅಚಾನಕ್ ದಾಳಿ ನಡೆಸಿ, ಗುಂಡಿನ ಜೊತೆಗೆ ಗ್ರೆನೇಡ್‌ಗಳನ್ನೂ ಎಸೆದಿದ್ದಾರೆ. ಇದಕ್ಕೆ ತಕ್ಷಣ ಪ್ರತಿದಾಳಿ ನಡೆಸಿದ ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಿ, ಸುತ್ತುವರಿದ ಪ್ರದೇಶವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಸಂಜೆ ಸುಮಾರು 5.40ರವರೆಗೆ ಗುಂಡಿನ ಚಕಮಕಿ ಮುಂದುವರಿದಿದ್ದು, ಗ್ರೆನೇಡ್ ಸ್ಫೋಟದಿಂದ ಹೆಚ್ಚಿನ ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರನ್ನು ತಟಸ್ಥಗೊಳಿಸುವ ಉದ್ದೇಶದಿಂದ ಡ್ರೋನ್‌ಗಳು ಮತ್ತು ಸ್ನಿಫರ್ ನಾಯಿಗಳ ನೆರವಿನಿಂದ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.


