ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಗುವಾಹಟಿಯಲ್ಲಿ ತೀವ್ರ ಸ್ಪರ್ಧೆಯ ನಡುವೆ ಸಾಗುತ್ತಿದ್ದರೂ, ಮೊದಲ ಎರಡು ದಿನಗಳು ಸಂಪೂರ್ಣವಾಗಿ ಆಫ್ರಿಕಾ ಬ್ಯಾಟ್ಸ್‌ಮನ್‌ಗಳ ಪರವಾಗಿಯೇ ತಿರುಗಿದವು. ಭಾರತೀಯ ಬೌಲರ್‌ಗಳು ವಿಕೆಟ್‌ಗಾಗಿ ಹೆಣಗಾಡುತ್ತಿದ್ದರೆ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸಾಕಷ್ಟು ಶ್ರಮಿಸಿದರೂ ಪಿಚ್ ಅವರ ಪರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುವಾಹಟಿ ಪಿಚ್ ಬಗ್ಗೆ ಕುಲ್ದೀಪ್ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜತೆಯಾಟದ ಆಧಾರದಲ್ಲಿ 489 ರನ್‌ಗಳ ಭಾರಿ ಮೊತ್ತ ಕಲೆಹಾಕಿದ ಬಳಿಕ, ಕುಲ್ದೀಪ್ ಗುವಾಹಟಿ ಪಿಚ್ ಅನ್ನು ಕೋಲ್ಕತ್ತಾದ ಟರ್ನಿಂಗ್ ಟ್ರ್ಯಾಕ್ ಜೊತೆ ಹೋಲಿಸಿ, “ಇಲ್ಲಿನ ಪಿಚ್ ರಸ್ತೆಯಂತೆ ಸಮತಟ್ಟಾಗಿದೆ” ಎಂದು ನಗೆಮಿಶ್ರಿತವಾಗಿ ಹೇಳಿದ್ದಾರೆ. 29.1 ಓವರ್‌ಗಳಲ್ಲಿ 115 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರೂ, ಈ ವಿಕೆಟ್ ಸ್ಪಿನ್ನರ್‌ಗಳಿಗೂ, ವೇಗಿ ಬೌಲರ್‌ಗಳಿಗೊ ಸಹಾಯ ಮಾಡಲಿಲ್ಲ ಎಂಬುದು ಅವರ ಅಭಿಪ್ರಾಯ.
ಪಿಚ್‌ನ ಮೊದಲ ಸೆಷನ್‌ನಲ್ಲಿ ಸ್ವಲ್ಪ ತಿರುಗಾಟ ಕಂಡರೂ, ನಂತರ ಬ್ಯಾಟಿಂಗ್ ತುಂಬಾ ಸುಲಭವಾಗಿತ್ತು ಎಂದು ಕುಲ್ದೀಪ್ ವಿವರಿಸಿದರು. ಎರಡನೇ ದಿನದಲ್ಲಿ ಯಾವುದೇ ಟರ್ನ್ ಕಾಣಿಸದೆ, ಬೌಲರ್‌ಗಳಿಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಯಿತು. ಅನುಭವ ಹೆಚ್ಚಾದಂತೆ ಬೌಲರ್‌ಗಳು ಪಿಚ್‌ಗಿಂತ ತಮ್ಮ ಯೋಜನೆಗಳತ್ತ ಗಮನ ಹರಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮೊದಲ ಅವಧಿಯಲ್ಲಿ ಭಾರತ ಉತ್ತಮ ಲೈನ್–ಲೆಂಗ್ತ್‌ನೊಂದಿಗೆ ಬೌಲಿಂಗ್ ಮಾಡಿ ದಕ್ಷಿಣ ಆಫ್ರಿಕಾವನ್ನು 69 ರನ್‌ಗಳಿಗೆ ಸೀಮಿತಗೊಳಿಸಿದ್ದರೂ, ಮಾರ್ಕೊ ಜಾನ್ಸನ್ ಅದ್ಭುತವಾಗಿ ಅವಕಾಶಗಳನ್ನು ಬಳಸಿಕೊಂಡು ಪಂದ್ಯದ ಗತಿ ಬದಲಾಯಿಸಿದರು. “ವಿಕೆಟ್ ಬ್ಯಾಟಿಂಗ್‌ಗೆ ತುಂಬಾ ಅನುಕೂಲಕರವಾಗಿದ್ದರಿಂದ, ಆ ಜತೆಯಾಟ ನಮಗೆ ದೊಡ್ಡ ಸವಾಲಾಯಿತು” ಎಂದು ಕುಲ್ದೀಪ್ ಹೇಳಿದರು.

