January19, 2026
Monday, January 19, 2026
spot_img

H-1B ಗೊಂದಲ: ವೀಸಾ ನಿರ್ಬಂಧ ಸಮರ್ಥಿಸಿಕೊಂಡ US ಉಪಾಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಸಾ ನವೀಕರಣಕ್ಕಾಗಿ ಸ್ವದೇಶಕ್ಕೆ ಬಂದಿದ್ದ ಅನೇಕ ಅನಿವಾಸಿ ಭಾರತೀಯರಿಗೆ ಅಮೆರಿಕದ ಬಾಗಿಲುಗಳು ತಾತ್ಕಾಲಿಕವಾಗಿ ಮುಚ್ಚಿದಂತಾಗಿದೆ. ಹಠಾತ್ ರದ್ದಾದ ಕಾನ್ಸುಲರ್ ಅಪಾಯಿಂಟ್‌ಮೆಂಟ್‌ಗಳು ಸಾವಿರಾರು H-1B ವೀಸಾ ಹೊಂದಿರುವವರ ಬದುಕನ್ನು ಅನಿಶ್ಚಿತತೆಗೆ ತಳ್ಳಿವೆ. ಇದೇ ವೇಳೆ, ಅಮೆರಿಕದ ಆಡಳಿತ ವಲಸೆ ನೀತಿಗಳನ್ನು ಮತ್ತಷ್ಟು ಕಠಿಣಗೊಳಿಸುವ ಸೂಚನೆಗಳು ಕಾಣಿಸಿಕೊಂಡಿದೆ.

ಈ ನಡುವೆ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ H-1B ವೀಸಾ ಕಾರ್ಯಕ್ರಮದ ಮೇಲಿನ ನಿರ್ಬಂಧಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ USA ಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಅವರು, ವಿದೇಶಿ ಕಾರ್ಮಿಕರ ನೇಮಕವನ್ನು ಕಡಿಮೆ ಮಾಡುವುದು ಅಮೆರಿಕದ ಕಾರ್ಮಿಕರ ಘನತೆ ಮತ್ತು ಆರ್ಥಿಕ ಸುರಕ್ಷೆಗೆ ಅಗತ್ಯ ಎಂದು ಹೇಳಿದರು. ಅಮೆರಿಕದ ಉದ್ಯೋಗಗಳನ್ನು ವಿದೇಶಿ ಅಥವಾ ಅಗ್ಗದ ಕಾರ್ಮಿಕರಿಗೆ ಒಪ್ಪಿಸುವ ಕಂಪನಿಗಳ ವಿರುದ್ಧ ಕಠಿಣ ನಿಲುವು ಅಗತ್ಯವಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.

ಡಿಸೆಂಬರ್ 10ರಿಂದ 26ರ ಅವಧಿಯಲ್ಲಿ ಸಾವಿರಾರು ವೀಸಾ ಅಪಾಯಿಂಟ್‌ಮೆಂಟ್‌ಗಳನ್ನು ರದ್ದು ಮಾಡಲಾಗಿದ್ದು, ಕೆಲವರಿಗೆ 2026 ಅಥವಾ 2027ರ ತನಕ ಹೊಸ ದಿನಾಂಕ ನೀಡಲಾಗಿದೆ. ಇದರ ಪರಿಣಾಮವಾಗಿ ಅಮೆಜಾನ್, ಮೈಕ್ರೋಸಾಫ್ಟ್, ಮೆಟಾ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಭಾರತೀಯರು ಭಾರತದಲ್ಲೇ ಸಿಲುಕಿಕೊಂಡಿದ್ದಾರೆ. ಈ ಸ್ಥಿತಿ ಉದ್ಯೋಗಿಗಳಷ್ಟೇ ಅಲ್ಲ, ಅಮೆರಿಕದ ಕಂಪನಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

Must Read