ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಉತ್ಪನ್ನಗಳಿಂದ ಬೇಸತ್ತಿರುವವರು ನೈಸರ್ಗಿಕ ಕೂದಲು ಆರೈಕೆಯತ್ತ ಮುಖ ಮಾಡುತ್ತಿದ್ದಾರೆ. ಅಂಥವರಲ್ಲಿ ಫ್ಲಾಕ್ಸ್‌ಸೀಡ್ ಜೆಲ್ (ಅಗಸೆ ಬೀಜದ ಜೆಲ್) ಕೂದಲಿನ ಆರೈಕೆಗೆ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಅಡುಗೆಮನೆಯಲ್ಲಿ ಸಿಗುವ ಈ ಸರಳ ಬೀಜದಿಂದ ತಯಾರಾಗುವ ಜೆಲ್, ಕೂದಲಿಗೆ ಪೋಷಣೆ, ಹೊಳಪು ಮತ್ತು ಬಲ ನೀಡುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ.
ಫ್ಲಾಕ್ಸ್‌ಸೀಡ್‌ನಲ್ಲಿ ಓಮೆಗಾ-3 ಫ್ಯಾಟಿ ಆಸಿಡ್‌ಗಳು, ವಿಟಮಿನ್ E ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಕೂದಲಿನ ಬೇರುಗಳನ್ನು ಬಲಪಡಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.
ಈ ಜೆಲ್ ತಲೆಚರ್ಮಕ್ಕೆ ತಂಪು ನೀಡುತ್ತದೆ, ಡ್ಯಾಂಡ್ರಫ್ ಹಾಗೂ ತುರಿಕೆ ಸಮಸ್ಯೆ ತಗ್ಗಿಸುತ್ತದೆ. ಒಣ ಮತ್ತು ಫ್ರಿಜಿ ಕೂದಲಿಗೆ ಇದು ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡಿ, ಕೂದಲನ್ನು ಮೃದುವಾಗಿಸುತ್ತದೆ. ನಿಯಮಿತ ಬಳಕೆಯಿಂದ ಕೂದಲು ಸಹಜವಾಗಿ ದಪ್ಪವಾಗುವಂತೆ ಕಾಣುತ್ತದೆ ಮತ್ತು ಬೆಳವಣಿಗೆಯೂ ಉತ್ತಮವಾಗುತ್ತದೆ.
ಫ್ಲಾಕ್ಸ್‌ಸೀಡ್ ಜೆಲ್ ಬಳಸುವ ವಿಧಾನ:
ಫ್ಲಾಕ್ಸ್‌ಸೀಡ್ ಜೆಲ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದು ತಲೆಚರ್ಮಕ್ಕೆ ಮತ್ತು ಕೂದಲಿನ ಉದ್ದಕ್ಕೆ ಹಚ್ಚಬೇಕು. ಹಗುರವಾಗಿ ಮಸಾಜ್ ಮಾಡಿ 30 ನಿಮಿಷ ಬಿಡಿ, ನಂತರ ಮೃದುವಾದ ಶ್ಯಾಂಪೂನಿಂದ ತೊಳೆಯಿರಿ. ಸ್ಟೈಲಿಂಗ್ ಜೆಲ್‌ನಂತೆ ಸ್ವಲ್ಪ ಪ್ರಮಾಣವನ್ನು ಒಣ ಕೂದಲಿಗೂ ಬಳಸಬಹುದು. ವಾರಕ್ಕೆ 2 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು.
ನಿಯಮಿತ ಆರೈಕೆಯ ಜೊತೆಗೆ ನೈಸರ್ಗಿಕ ಪದಾರ್ಥವನ್ನು ಆಯ್ಕೆ ಮಾಡುವುದು ಕೂದಲಿನ ಆರೋಗ್ಯಕ್ಕೆ ದೀರ್ಘಕಾಲದ ಲಾಭ ನೀಡುತ್ತದೆ. ಫ್ಲಾಕ್ಸ್‌ಸೀಡ್ ಜೆಲ್ ಅದಕ್ಕೆ ಸರಳ ಮತ್ತು ಸುರಕ್ಷಿತ ಪರಿಹಾರ.

