ಕೂದಲು ನಮ್ಮ ವ್ಯಕ್ತಿತ್ವದ ಪ್ರಮುಖ ಭಾಗ. ಆದರೆ ಇಂದಿನ ಕಾಲದಲ್ಲಿ ಮಾಲಿನ್ಯ, ಆಹಾರದ ಅಭ್ಯಾಸ, ಒತ್ತಡ ಹಾಗೂ ತಪ್ಪು ಜೀವನಶೈಲಿಯಿಂದ ಕೂದಲು ಉದುರುವಿಕೆ, ತಲೆಹೊಟ್ಟು, ಹೊಳಪು ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳು ಹೆಚ್ಚಾಗಿವೆ. ದುಬಾರಿ ಉತ್ಪನ್ನಗಳನ್ನು ಬಳಸದೆ, ಮನೆಯಲ್ಲಿ ಪಾಲಿಸಬಹುದಾದ ಕೆಲವು ಸರಳ ವಿಧಾನಗಳಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಎಣ್ಣೆ ಮಸಾಜ್ ಮಾಡುವುದು
ವಾರದಲ್ಲಿ ಎರಡು ಅಥವಾ ಮೂರು ಬಾರಿ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆಯಿಂದ ಮಸಾಜ್ ಮಾಡಿದರೆ ಕೂದಲಿಗೆ ಪೋಷಣೆ ಸಿಗುತ್ತದೆ. ಇದು ರಕ್ತಪರಿಚಲನೆಯನ್ನು ಸುಧಾರಿಸಿ ತಲೆಹೊಟ್ಟು ಹಾಗೂ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಒದ್ದೆ ಕೂದಲಿಗೆ ಟವೆಲ್ ಕಟ್ಟಬೇಡಿ
ತಲೆ ಸ್ನಾನದ ನಂತರ ಕೂದಲು ಒದ್ದೆಯಾಗಿರುವಾಗ ಬಿಗಿಯಾಗಿ ಟವೆಲ್ ಸುತ್ತುವುದು ತಪ್ಪು. ಇದರಿಂದ ಬೇರುಗಳು ದುರ್ಬಲಗೊಂಡು ಕೂದಲು ಒಡೆಯುತ್ತದೆ. ಬದಲಿಗೆ, ನಾಜೂಕಾಗಿ ಒರೆಸುವುದು ಉತ್ತಮ.

ಮಲಗುವ ಮುನ್ನ ಎಣ್ಣೆ ಹಚ್ಚಿ
ಉಗುರುಬೆಚ್ಚಗಿನ ಎಣ್ಣೆ ಹಚ್ಚಿಕೊಂಡು ಮಲಗುವುದರಿಂದ ತಲೆಬುರುಡೆಗೆ ಪೋಷಣೆ ದೊರೆಯುತ್ತದೆ. ಬೆಳಗ್ಗೆ ಶಾಂಪೂ ಬಳಸಿ ತೊಳೆಯುವುದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ.

ಕೂದಲು ಬಾಚಿ ಜಡೆ ಹಾಕಿಕೊಳ್ಳಿ
ಮಲಗುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿ, ಉದ್ದ ಕೂದಲಿದ್ದರೆ ಜಡೆ ಹಾಕಿಕೊಳ್ಳುವುದು ಸೂಕ್ತ. ಇದು ಕೂದಲು ಸಡಿಲವಾಗಿ ಒಡೆಯುವುದನ್ನು ತಡೆಯುತ್ತದೆ.

ಸರಿಯಾದ ಆಹಾರ ಮತ್ತು ನೀರಿನ ಸೇವನೆ
ನೀರನ್ನು ಸಾಕಷ್ಟು ಕುಡಿಯುವುದು ಹಾಗೂ ನೆಲ್ಲಿಕಾಯಿ ರಸವನ್ನು ವಾರದಲ್ಲಿ ಎರಡು-ಮೂರು ಬಾರಿ ಸೇವಿಸುವುದು ಕೂದಲಿಗೆ ಒಳಗಿನಿಂದ ಬಲ ನೀಡುತ್ತದೆ. ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತವೆ.

ತಲೆಹೊಟ್ಟು ನಿವಾರಣೆ
ತೆಂಗಿನೆಣ್ಣೆ ಮತ್ತು ಹರಳೆಣ್ಣೆಯನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ತಲೆಬುರುಡೆ ಸ್ವಚ್ಛವಾಗುತ್ತದೆ. ತಲೆಹೊಟ್ಟು ಕಡಿಮೆಯಾಗುತ್ತದೆ ಮತ್ತು ತ್ವಚೆ ಒಣಗುವುದಿಲ್ಲ.

ಕೂದಲು ಉದುರುವಿಕೆಗೆ ಪರಿಹಾರ
ಹರಳೆಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣವು ಹೊಸ ಕೂದಲು ಬೆಳೆಯಲು ಸಹಾಯಕ. ನಿಯಮಿತವಾಗಿ ಹಚ್ಚುವುದರಿಂದ ದಟ್ಟವಾದ ಮತ್ತು ಹೊಳೆಯುವ ಕೂದಲು ದೊರೆಯುತ್ತದೆ.