ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಪಿಗೆಹಳ್ಳಿಯ ಅಗ್ರಹಾರ ಲೇಔಟ್‌ನಲ್ಲಿ ವೃತ್ತಿ ಬದುಕಿನ ವಿಚಾರವಾಗಿ ದಂಪತಿಗಳ ನಡುವೆ ನಡೆದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯ ಕೆಲಸದ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಪತಿಯೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಆಯೇಷಾ ಸಿದ್ದಿಕಿ ಎಂದು ಗುರುತಿಸಲಾಗಿದೆ. ಆಯೇಷಾ ಈ ಹಿಂದೆ ಎರಡು ಮದುವೆಯಾಗಿದ್ದು, ಮೊದಲ ಪತಿ ಮೃತಪಟ್ಟಿದ್ದರು. ಎರಡನೇ ಪತಿಗೆ ವಿಚ್ಛೇದನ ನೀಡಿದ್ದ ಈಕೆ, ಕೇವಲ ಮೂರು ತಿಂಗಳ ಹಿಂದಷ್ಟೇ ಸೈಯದ್ ಜಬಿ (47) ಎಂಬಾತನನ್ನ ವಿವಾಹವಾಗಿದ್ದಳು.
ಆಯೇಷಾ ಸಿದ್ದಿಕಿ ಬ್ಯೂಟಿ ಪಾರ್ಲರ್ ಮತ್ತು ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕೆಲಸಕ್ಕೆ ಪತಿ ಸೈಯದ್ ಜಬಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಕೂಡಲೇ ಕೆಲಸ ಬಿಡುವಂತೆ ಆಕೆಗೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ದಂಪತಿಗಳ ನಡುವೆ ಪ್ರತಿದಿನ ಕಿರಿಕ್ ನಡೆಯುತ್ತಿತ್ತು.
ಘಟನೆಯ ದಿನವೂ ಕೆಲಸದ ವಿಚಾರವಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶಗೊಂಡ ಸೈಯದ್, ಪತ್ನಿ ಆಯೇಷಾಳನ್ನು ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸೈಯದ್ ಜಬಿ ನೇರವಾಗಿ ಯಲಹಂಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸದ್ಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

