ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಹಣಾಹಣಿ ಇಂದು ಕೇರಳದ ತಿರುವನಂತಪುರದಲ್ಲಿ ನಡೆಯುತ್ತಿದೆ. ಈಗಾಗಲೇ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು 3-0 ಅಂತರದ ಅಜೇಯ ಮುನ್ನಡೆ ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ಪಡೆ, ಸರಣಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದೆ.
ಆದರೆ, ಮುಂಬರುವ ಟಿ20 ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಈ ಪಂದ್ಯ ಟೀಮ್ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸರಣಿ ಗೆದ್ದಿದ್ದರೂ ಸಹ, ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಪರಿಪೂರ್ಣ ಪ್ರದರ್ಶನ ನೀಡುವ ಗುರಿಯನ್ನು ಭಾರತ ಹೊಂದಿದೆ.
ಈ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಅದೃಷ್ಟ ಶ್ರೀಲಂಕಾ ತಂಡದ ಪರವಾಗಿ ನಿಂತಿದೆ. ಟಾಸ್ ಗೆದ್ದ ಲಂಕಾ ನಾಯಕಿ ಚಾಮರಿ ಅಟಾಪಟು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದು, ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ಭಾರತ, ಪಂದ್ಯವನ್ನೂ ಗೆದ್ದು ಬೀಗಿತ್ತು. ಇಂದು ಲಂಕಾ ಈ ಲಕ್ ಬದಲಾಯಿಸುತ್ತದೆಯೇ ಎಂದು ಕಾದು ನೋಡಬೇಕು.
ನಾಲ್ಕನೇ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಜೆಮಿಮಾ ರೊಡ್ರಿಗಸ್ ಮತ್ತು ಕ್ರಾಂತಿ ಗೌಡ್ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ ಹರ್ಲೀನ್ ಡಿಯೋಲ್ ಮತ್ತು ಅರುಂಧತಿ ರೆಡ್ಡಿ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

