ಹೊಸದಿಗಂತ ಚಿತ್ರದುರ್ಗ:
“ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರ ಮತ್ತು ಸಮಾಜದೊಂದಿಗೆ ಯಾವುದೇ ಸಂಘರ್ಷವಿಲ್ಲದೆ, ಸಾಮರಸ್ಯದಿಂದ ಬದುಕುವ ಮಾರ್ಗವೇ ಹಿಂದೂ ಧರ್ಮ” ಎಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ತಿಳಿಸಿದರು.
ನಗರದ ಜೆಸಿಆರ್ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಹಿಂದೂ ಎಂಬುದು ಕೇವಲ ಒಂದು ಆಚರಣೆಯಲ್ಲ, ಅದೊಂದು ಸುಸಂಸ್ಕೃತ ಜೀವನ ಪದ್ಧತಿ ಎಂದು ಅವರು ವಿಶ್ಲೇಷಿಸಿದರು.
ಭಾರತವು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮತ್ತು ಪ್ರಾಚೀನ ಇತಿಹಾಸವನ್ನು ಹೊಂದಿರುವ ರಾಷ್ಟ್ರ. ಆದರೆ, ಕಾಲಕ್ರಮೇಣ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆತಿದ್ದರಿಂದ ದೇಶ ಪರಕೀಯರ ಆಡಳಿತಕ್ಕೆ ಸಿಲುಕಿತು. ಒಂದು ಕಾಲದಲ್ಲಿ ಜನರು ‘ಹಿಂದೂ’ ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನಂತಹ ಸಂಘಟನೆಗಳು ಜಾಗೃತಿ ಮೂಡಿಸಿ, ಇಂದು ಪ್ರತಿಯೊಬ್ಬರೂ ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುವ ವಾತಾವರಣ ನಿರ್ಮಿಸಿವೆ ಎಂದು ಅವರು ಸ್ಮರಿಸಿದರು.
ಮುಂದಿನ ಪೀಳಿಗೆಗೆ ಈ ಶ್ರೇಷ್ಠ ಸಂಸ್ಕೃತಿಯನ್ನು ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಗಳಲ್ಲಿ ಶಿಕ್ಷಕರು ಅಕ್ಷರ ಜ್ಞಾನ ನೀಡಿದರೆ, ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಗೋವು, ಮಣ್ಣು, ಕಲ್ಲು ಹಾಗೂ ಸಕಲ ಚರಾಚರ ವಸ್ತುಗಳಲ್ಲಿ ದೈವತ್ವ ಕಾಣುವ ನಮ್ಮ ಪರಂಪರೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೊಳ್ಳ ಕಿವಿಮಾತು ಹೇಳಿದರು.
ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ ಯಾವುದೇ ಸ್ಥಾನವಿಲ್ಲ. ಇದು ಮಧ್ಯದಲ್ಲಿ ಯಾರೋ ಸೃಷ್ಟಿಸಿದ ಅನಿಷ್ಟ ಪದ್ಧತಿಯಾಗಿದೆ. ಜಾತಿ, ಮೇಲು-ಕೀಳು ಹಾಗೂ ಬಡವ-ಬಲ್ಲಿದ ಎಂಬ ಭೇದಭಾವ ಮರೆತು ಎಲ್ಲರೂ ಒಂದಾಗಿ ಸಹಭೋಜನ ಮಾಡುವ ಮೂಲಕ ಸಾಮರಸ್ಯ ಮೆರೆಯಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, “ಭಾರತವು ಶಾಂತಿ ಮತ್ತು ತ್ಯಾಗಕ್ಕೆ ಜಗತ್ತಿಗೆ ಮಾದರಿಯಾಗಿದೆ. ನಾವು ಎಂದೂ ಯಾರ ಮೇಲೂ ದಬ್ಬಾಳಿಕೆ ಮಾಡಿದವರಲ್ಲ. ಆದರೆ, ನಮ್ಮ ಸಂಸ್ಕೃತಿ ಮತ್ತು ಧರ್ಮದ ಮೇಲೆ ಪ್ರಹಾರ ನಡೆದಾಗ ಸುಮ್ಮನಿರಬಾರದು. ಸಮಾಜ ಇಂದು ಎಚ್ಚೆತ್ತುಕೊಳ್ಳುವ ಅಗತ್ಯವಿದೆ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ಚಾಲುಕ್ಯ ನವೀನ್ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕಿ ಸುನಿತಾ ಮುರುಳಿ ವೇದಿಕೆಯಲ್ಲಿದ್ದರು.


