ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಮಸಾಲೆ ಪದಾರ್ಥವೆಂದರೆ ಕೇಸರಿ. ಒಂದು ಗ್ರಾಂ ತೂಕಕ್ಕೆ ನೂರಾರು ರೂಪಾಯಿಗಳನ್ನು ಬೇಡುವ ಈ ಪದಾರ್ಥವು ಕೇವಲ ಅಡುಗೆಯಲ್ಲದೇ ಆರೋಗ್ಯ ಮತ್ತು ಸೌಂದರ್ಯ ಆರೈಕೆಯಲ್ಲಿಯೂ ವಿಶೇಷ ಸ್ಥಾನ ಪಡೆದಿದೆ. ಕ್ರೋಕಸ್ ಸ್ಯಾಟಿವಸ್ ಹೂವಿನ ಎಳೆಗಳಿಂದ ಸಿಗುವ ಕೇಸರಿಯ ಮೌಲ್ಯವನ್ನು ಅದರ ಉತ್ಪಾದನಾ ಪ್ರಕ್ರಿಯೆಯ ಕಠಿಣತೆ ಸ್ಪಷ್ಟಪಡಿಸುತ್ತದೆ. ಇತ್ತೀಚೆಗೆ ಚರ್ಮದ ಆರೋಗ್ಯಕ್ಕೆ ಕೇಸರಿಯ ಮಹತ್ವವನ್ನು ವೈದ್ಯರು ಹಾಗೂ ತಜ್ಞರು ಹೆಚ್ಚು ಒತ್ತಿ ಹೇಳುತ್ತಿದ್ದಾರೆ.

ಆರೋಗ್ಯಕರ ಗುಣಗಳು:
ಚರ್ಮರೋಗ ತಜ್ಞರ ಪ್ರಕಾರ, ಕೇಸರಿ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಒಣ ಚರ್ಮಕ್ಕೆ ತೇವಾಂಶವನ್ನು ಒದಗಿಸಿ, ಕಾಂತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಆ್ಯಂಟಿ ಏಜಿಂಗ್ ಉತ್ಪನ್ನಗಳ ತಯಾರಿಕೆಯಲ್ಲಿ ಕೇಸರಿಯ ಬಳಕೆ ಸಾಮಾನ್ಯ. ಇನ್ನು ಸ್ಕಿನ್ ಲೋಷನ್ ಮತ್ತು ಮಾಶ್ಚುರೈಸರ್ ತಯಾರಿಕೆಯಲ್ಲಿ ಕೇಸರಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಅಧ್ಯಯನಗಳ ಪ್ರಕಾರ:
ಕೆಲವು ಅಧ್ಯಯನಗಳು ಕೇಸರಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ ಎಂದು ತಿಳಿಸಿವೆ. ಇದರ ಪರಿಣಾಮವಾಗಿ ಮೊಡವೆ, ನವೆ, ಚರ್ಮದ ಕಿರಿಕಿರಿ ಮತ್ತು ಉರಿಯೂತದಂತಹ ಸಮಸ್ಯೆಗಳು ತಗ್ಗುತ್ತವೆ. ಜೊತೆಗೆ, ಡಾರ್ಕ್ ಸ್ಪಾಟ್‌ಗಳನ್ನು ಕಡಿಮೆ ಮಾಡಿ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತದೆ.

ಎಣ್ಣೆ ಅಥವಾ ಎಳೆಗಳು ಯಾವುದು ಬೆಸ್ಟ್?
ಕೇಸರಿ ಎರಡು ರೂಪಗಳಲ್ಲಿ ಲಭ್ಯ—ಒಣ ಎಳೆಗಳು ಮತ್ತು ಎಣ್ಣೆ. ತಜ್ಞರ ಪ್ರಕಾರ, ಎಣ್ಣೆಯು ಸಹ ಉರಿಯೂತ ನಿರೋಧಕ ಗುಣ ಹೊಂದಿದ್ದರೂ, ನೇರವಾಗಿ ಬಳಸುವ ಒಣ ಎಳೆಗಳು ಹೆಚ್ಚು ಪರಿಣಾಮಕಾರಿ. ಎಳೆಗಳಲ್ಲಿ ಇರುವ ಶುದ್ಧತೆ ಮತ್ತು ನೈಸರ್ಗಿಕ ಶಕ್ತಿಯೇ ಚರ್ಮದ ಆರೈಕೆಗೆ ಹೆಚ್ಚು ಸಹಾಯಕ.