ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದ್ದು, ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದ್ದು, 15 ಸದಸ್ಯರುಗಳ ಬಳಗದಲ್ಲಿ ಯುವ ವೇಗಿ ಹರ್ಷಿತ್ ರಾಣಾ ಕೂಡ ಆಯ್ಕೆಯಾಗಿದ್ದಾರೆ. ರಾಣಾ ಅವರ ಈ ಆಯ್ಕೆ ಬಗ್ಗೆ ಟೀಮ್ ಇಂಡಿಯಾದ ಕೆಲ ಮಾಜಿ ಆಟಗಾರರು ಪ್ರಶ್ನೆಗಳೆನ್ನೆತ್ತಿದ್ದರು. ಅಲ್ಲದೆ ಹರ್ಷಿತ್ ರಾಣಾ ಅವರ ಆಯ್ಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಎಲ್ಲಾ ಟ್ರೋಲ್ಗಳಿಗೆ ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗೌತಮ್ ಗಂಭೀರ್, ಹರ್ಷಿತ್ ರಾಣಾ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಆತ ಇನ್ನೂ 23 ವರ್ಷದ ಹುಡುಗ. ಅವನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಹರ್ಷಿತ್ ರಾಣಾ ಅವರ ತಂದೆ ಯಾವುದೇ ಸಂಸ್ಥೆಯ ಮಾಜಿ ಅಧ್ಯಕ್ಷನಲ್ಲ, ಮಾಜಿ ಕ್ರಿಕೆಟಿಗ ಅಥವಾ ಅಧಿಕಾರಿಯಲ್ಲ. ಇದಾಗ್ಯೂ ಆತ ಇಂದು ಈ ಸ್ಥಾನಕ್ಕೇರಿದ್ದಾರೆ. ಇಲ್ಲಿತನಕ ತಲುಪಿರುವುದು ಸ್ವಂತ ಅರ್ಹತೆಯಿಂದ. ಆದ್ದರಿಂದ ಹರ್ಷಿತ್ನನ್ನು ಗುರಿಯಾಗಿಸುವುದು ಸಂಪೂರ್ಣವಾಗಿ ತಪ್ಪು. ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯಾವುದೇ ಹುಡುಗ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ಅವನ ಆದ್ಯತೆ ಉತ್ತಮವಾಗಿ ಆಡುವುದು ಮತ್ತು ತನ್ನ ದೇಶಕ್ಕಾಗಿ ಆಡುವುದಾಗಿರುತ್ತದೆ. ನೀವು ನಿಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಚಾರ ಮಾಡಲು ಯಾರ ಬಗ್ಗೆಯೂ ಏನನ್ನೂ ಹೇಳಬೇಡಿ. ನೀವು ಯಾರನ್ನಾದರೂ ಗುರಿಯಾಗಿಸಲು ಬಯಸಿದರೆ, ನನ್ನನ್ನು ಗುರಿಯಾಗಿಸಿ. ನಾನು ಅದನ್ನು ನಿಭಾಯಿಸುತ್ತೇನೆ. ಆದರೆ ಯುವ ಆಟಗಾರರನ್ನು ಬಿಟ್ಟುಬಿಡಿ ಎಂದು ಗೌತಮ್ ಗಂಭೀರ್ ಮನವಿ ಮಾಡಿದ್ದಾರೆ.