ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪಪಟ್ಟಿಯನ್ನು ದೆಹಲಿ ನ್ಯಾಯಾಲಯವು ತಿರಸ್ಕರಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಈ ಬೆಳವಣಿಗೆಯನ್ನು “ಸತ್ಯಕ್ಕೆ ಸಂದ ಜಯ” ಎಂದು ಬಣ್ಣಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕತ್ವವನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ. “ಗಾಂಧಿ ಕುಟುಂಬಕ್ಕೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಈ ಪ್ರಕರಣವನ್ನು ಸೃಷ್ಟಿಸಲಾಗಿದೆ. ಎಫ್‌ಐಆರ್ ಇಲ್ಲದಿದ್ದರೂ ಕೇವಲ ರಾಜಕೀಯ ದ್ವೇಷಕ್ಕಾಗಿ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ನ್ಯಾಯಾಲಯದ ನಿರ್ಧಾರವು ಬಿಜೆಪಿಯ ಪಿತೂರಿಯನ್ನು ಬಯಲು ಮಾಡಿದೆ ಎಂದ ಖರ್ಗೆ, “ನಮ್ಮ ಘೋಷಣೆ ಯಾವಾಗಲೂ ‘ಸತ್ಯಮೇವ ಜಯತೇ’. ಇಂದು ನ್ಯಾಯ ಗೆದ್ದಿದೆ. ರಾಜಕೀಯ ವಿರೋಧಿಗಳನ್ನು ಹಣಿಯಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರು ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು” ಎಂದು ಗುಡುಗಿದ್ದಾರೆ.

