ಹೊಸದಿಗಂತ ಹಾಸನ:
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತಷ್ಟು ದುರಂತಗಳನ್ನು ಸೃಷ್ಟಿಸುತ್ತಿದ್ದು, ಅರಕಲಗೂಡು ತಾಲ್ಲೂಕಿನ ಮತ್ತಿಗೋಡು ಗ್ರಾಮದಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ.
ಮೃತ ಮಹಿಳೆಯನ್ನು ಜವರಮ್ಮ (೬೩) ಎಂದು ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ ೫.೩೦ರ ಸುಮಾರಿಗೆ ಜವರಮ್ಮ ಮತ್ತು ಆಕೆಯ ಪುತ್ರ ಮಲಗಿದ್ದ ಹಳೆಯ ಮನೆಯ ಗೋಡೆ ದಿಢೀರನೆ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಜವರಮ್ಮ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಆಕೆಯ ಮಗ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಎ. ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಜಲಾವೃತವಾದ ತೋಟಗಳು, ಕೆರೆ ಕೋಡಿ:
ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಮತ್ತು ಆಸ್ತಿ ನಷ್ಟ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರೈತರ ಜಮೀನುಗಳಿಗೆ ಮಳೆ ನೀರು ನುಗ್ಗಿ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ.
ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮದ ಬೃಹತ್ ಕೆರೆ ತುಂಬಿ ಕೋಡಿ ಬಿದ್ದಿದ್ದು, ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮವಾಗಿ, ಕಲಸಿಂದ, ವಡ್ಡರಹಳ್ಳಿ ಮತ್ತು ಗೊಲ್ಲರಹೊಸಹಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಾಗೂರು ಬೈಪಾಸ್ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಆದಿಲ್ ಪಾಷಾ, ಫಾಜಲ್ ಪಾಷಾ ಮತ್ತು ರಾಮಶೆಟ್ಟಿ ಅವರಿಗೆ ಸೇರಿದ ತೆಂಗಿನ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ವಿಶೇಷವೆಂದರೆ, ಕೆರೆ ಕೋಡಿ ಬಿದ್ದ ನೀರಿನಲ್ಲಿ ಸಾವಿರಾರು ಮೀನುಗಳು ತೋಟಗಳಲ್ಲಿ ಕಾಣಿಸಿಕೊಂಡಿದ್ದು, ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಜನರು ಮುಗಿಬಿದ್ದ ದೃಶ್ಯ ಕಂಡುಬಂದಿತು.
ನಗರದಲ್ಲೂ ಗೋಡೆ ಕುಸಿತ:
ನಗರದ ಹೊಸಲೈನ್ ರಸ್ತೆಯಲ್ಲಿನ ಅಸ್ಲಂ ಶೇರ್ ಖಾನ್ ಅವರಿಗೆ ಸೇರಿದ ವಾಸದ ಮನೆಯ ಅರ್ಧ ಗೋಡೆ ಸಂಪೂರ್ಣವಾಗಿ ಕುಸಿದಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಡೆ ಕುಸಿತದಿಂದ ಮನೆಯಲ್ಲಿದ್ದ ಪೀಠೋಪಕರಣಗಳು ಜಖಂಗೊಂಡಿವೆ. ಮಳೆ ತಂದೊಡ್ಡಿದ ಅನಾಹುತದಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ.

