Sunday, January 11, 2026

ಹಾಸನ ಪೊಲೀಸರ ಭರ್ಜರಿ ಬೇಟೆ: 79 ಪ್ರಕರಣಗಳ ಅಂತರರಾಜ್ಯ ಖತರ್ನಾಕ್ ಕಳ್ಳ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಪೆನ್ಷನ್‍ಮೊಹಲ್ಲಾ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಎರಡು ರಾಜ್ಯಗಳಲ್ಲಿ ಅತೀ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರಿನ ವಿನಾಯಕ ನಗರದ ಗೆದ್ದಲಹಳ್ಳಿ ಮೂಲದ ಸೋಹಿಲ್‍ಖಾನ್ (38) ಎಂದು ಗುರುತಿಸಲಾಗಿದೆ. ಈತನ ಅಪರಾಧದ ಇತಿಹಾಸ ಬೆಚ್ಚಿಬೀಳಿಸುವಂತಿದ್ದು, ಒಟ್ಟು 79 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು. ಇದರಲ್ಲಿ ಕರ್ನಾಟಕದಲ್ಲಿ 27 ಹಾಗೂ ಆಂಧ್ರಪ್ರದೇಶದಲ್ಲಿ 52 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರಲ್ಲಿ ಈತನ ವಿರುದ್ಧ ಅಪರಾಧ ಸಾಬೀತಾಗಿತ್ತು.

ಇತ್ತೀಚೆಗೆ ಹಾಸನದ ಪೆನ್ಷನ್‍ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಶಾರದಾ ಮತ್ತು ಪ್ರೇಮಾ ಎಂಬುವವರ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ಕಳ್ಳತನ ನಡೆದಿತ್ತು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಂಧಿತನಿಂದ ಅಂದಾಜು 250 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೆನ್ಷನ್‍ಮೊಹಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ (PI) ಸ್ವಾಮಿನಾಥ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ರವಿಶಂಕರ್, ಪ್ರಸನ್ನ ಕುಮಾರ್ ಹಾಗೂ ಸಿಬ್ಬಂದಿಗಳಾದ ದಿಲೀಪ್, ಲೋಕೇಶ್, ಪುನೀತ್ ಮತ್ತು ಹನುಮೇಶ ನಾಯಕ್ ಅವರು ಪಾಲ್ಗೊಂಡಿದ್ದರು. ಈ ಯಶಸ್ವಿ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!