ಹೊಸದಿಗಂತ ವರದಿ ಹಾಸನ:
ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದುರಂತ ಹಿನ್ನೆಲೆಯಲ್ಲಿ ತಡ ರಾತ್ರಿ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಘೋರ ದುರಂತ ಘಟನೆ ಭವಿಷ್ಯದ ಪೀಳಿಗೆಗಳು, ಅವರ ತಂದೆ ತಾಯಿ ಮಕ್ಕಳ ಭವಿಷ್ಯ ದೃಷ್ಟಿಯಿಂದ ಎಲ್ಲಾ ಮಕ್ಳಳ ಮೇಲೂ ಕುಟುಂಬಸ್ಥರು ದೊಡ್ಡ ಕಲ್ಪನೆಯನ್ನ ಕಟ್ಟಿಕೊಂಡಿರುತ್ತಾರೆ.ಈ ಘಟನೆಯಿಂದ ಅವರ ಮನಸ್ಸಿನ ಮೇಲೆ ಆದ ನೋವು ನಾವು ಯಾರು ದೂರ ಮಾಡುವುದಕ್ಕೆ ಆಗಲ್ಲ. ಆ ಭಗವಂತನೇ ತಾಯಿ ಚಾಮುಂಡೇಶ್ವರಿ ಈ ನೋವನ್ನ ಭರಿಸುವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಂತ್ವನ ಹೇಳಿದರು.

ಇವತ್ತು ಆಗಿರುವ ದುರ್ಘಟನೆ ಜೀವಕ್ಕೆ ಯಾರು ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಅದರಲ್ಲೂ ಅವರ ತಂದೆ ತಾಯಿ ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಅವರ ಕನಸುಗಳು ಇವತ್ತು ಮಣ್ಣುಪಾಲಾಗಿದೆ.ಅವರ ಜಾಗದಲ್ಲಿ ನಾವ್ಯಾರು ಊಹೆ ಮಾಡಿಕೊಳ್ಳಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ ಮಾನ್ಯ ಮುಖ್ಯಮಂತ್ರಿಗಳು 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಅದನ್ನ ಸ್ವಾಗತ ಮಾಡುತ್ತೇವೆ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ಮಾನವೀಯತೆ ದೃಷ್ಟಿಯಿಂದ ಸರ್ಕಾರ ಇನ್ನು ಹೆಚ್ಚಾಗಿ ಪರಿಹಾರ ಘೋಷಣೆ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

ಈ ಘಟನೆಯನ್ನು ನಾವು ಯಾರೂ ಊಹೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ದುರಂತದ ವಿಡಿಯೋ ನೋಡಿ ನಾವೆಲ್ಲರೂ ಬೆಚ್ಚಿಬಿದ್ದಿದ್ದೇವೆ. ನಾವು ಜೀರ್ಣ ಮಾಡಿಕೊಳ್ಳಲಾಗುವುದಿಲ್ಲ ಅಂತ ದೃಶ್ಯ ಅದು. ಈ ಘಟನೆಯ ಉನ್ನತ ತನಿಖೆಗೆ ನಿಖಿಲ್ ಕುಮಾರಸ್ವಾಮಿಯವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಅವರು, ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಟಿ ಮಂಜು ಅವರು ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.