ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆದಿದ್ದ ಹಾಸನಾಂಬೆ ಉತ್ಸವಕ್ಕೆ ನಾಳೆ (ಅ. 22) ತೆರೆಬೀಳಲಿದೆ. ಅಕ್ಟೋಬರ್ 10ರಿಂದ ಆರಂಭಗೊಂಡಿದ್ದ ಈ ವರ್ಷದ ಸಾರ್ವಜನಿಕ ದರ್ಶನಕ್ಕೆ ನಾಳೆಯೇ ಕೊನೆಯ ದಿನ. ಕೇವಲ 12 ದಿನಗಳ ಅವಧಿಯಲ್ಲಿ ಹಾಸನಾಂಬೆಯ ಆಶೀರ್ವಾದ ಪಡೆಯಲು 23 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು, ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಮಹಾತಾಯಿ ಹಾಸನಾಂಬೆ ದರ್ಶನೋತ್ಸವ ಈ ಬಾರಿ ಆದಾಯದಲ್ಲೂ ಇತಿಹಾಸ ನಿರ್ಮಿಸಿದೆ. ಟಿಕೆಟ್ ಮತ್ತು ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ.ಗೂ ಹೆಚ್ಚು ಆದಾಯ ಹರಿದು ಬಂದಿದ್ದು, ಇದು ಹಾಸನಾಂಬೆ ಸನ್ನಿಧಿಗೆ ಬಂದ ಅತ್ಯಧಿಕ ಆದಾಯವಾಗಿದೆ. ಇನ್ನೂ ಒಂದು ದಿನ ಬಾಕಿ ಇರುವಾಗಲೇ ಈ ದಾಖಲೆ ಸೃಷ್ಟಿಯಾಗಿದೆ.
ಭಕ್ತರ ದಂಡು ಮತ್ತು ಗಣ್ಯರ ಭೇಟಿ
ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಬಂದ ಭಕ್ತಸಾಗರವು ಹಾಸನಾಂಬೆಯ ದರ್ಶನ ಪಡೆಯುತ್ತಿದೆ. ಅಕ್ಟೋಬರ್ 9ರ ಗುರುವಾರ ದೇಗುಲದ ಬಾಗಿಲು ತೆರೆದಿದ್ದು, ಅಕ್ಟೋಬರ್ 10ರ ಶುಕ್ರವಾರದಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆರಂಭದ ನಾಲ್ಕು ದಿನಗಳಲ್ಲಿ ಸರಾಸರಿ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದಿದ್ದರೆ, ಅಕ್ಟೋಬರ್ 17ರ ಏಕಾದಶಿ ದಿನದಂದು ದಾಖಲೆಯ ನಾಲ್ಕು ಲಕ್ಷ ಭಕ್ತರು ದೇವಿಯ ದರ್ಶನ ಪಡೆದರು. ನಂತರದ ದಿನಗಳಲ್ಲಿ ನಿತ್ಯವೂ ಎರಡರಿಂದ ಎರಡೂವರೆ ಲಕ್ಷ ಭಕ್ತರು ಆಗಮಿಸಿದ್ದಾರೆ. ಕಳೆದ ವರ್ಷ 20 ಲಕ್ಷ ಭಕ್ತರ ದಾಖಲೆಯನ್ನು ಈ ಬಾರಿ ಕೇವಲ 12 ದಿನಗಳಲ್ಲಿ ಮೀರಿಸಲಾಗಿದೆ.
ಭಕ್ತರಲ್ಲದೆ, ಹಲವು ರಾಜಕೀಯ ನಾಯಕರು, ಸಿನಿತಾರೆಯರು, ಮಠಾಧೀಶರು ಹಾಗೂ ನಾಡಿನ ಪ್ರತಿಷ್ಠಿತರು ದೇವಿಯ ದರ್ಶನ ಪಡೆದಿದ್ದಾರೆ. ನಿನ್ನೆ ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಶಾಸಕರಾದ ಜಿ.ಟಿ. ದೇವೇಗೌಡ, ಭಾಗೀರತಿ, ಸಿಎನ್ ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು. ನಟ ವಿಜಯ್ ರಾಘವೇಂದ್ರ ಮತ್ತು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸಹ ಶಕ್ತಿದೇವತೆಗೆ ನಮಿಸಿದ್ದಾರೆ. ಇಂದು ಕೂಡ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಇಂದಿನ ದರ್ಶನ ವಿವರ:
ಇಂದು ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆ ದರ್ಶನ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ನಿರಂತರ ದರ್ಶನ ಇರಲಿದೆ. 2 ಗಂಟೆಯಿಂದ 3:30ರವರೆಗೆ ನೈವೇದ್ಯಕ್ಕಾಗಿ ದೇಗುಲದ ಬಾಗಿಲು ಮುಚ್ಚಲಿದ್ದು, ನಂತರ ರಾತ್ರಿವರೆಗೂ ಭಕ್ತರಿಗೆ ದರ್ಶನ ಭಾಗ್ಯ ಲಭ್ಯವಿರಲಿದೆ.
ವರ್ಷಕ್ಕೊಮ್ಮೆ ಮಾತ್ರ ತೆರೆದುಕೊಳ್ಳುವ ಈ ದೇವಿಯ ದರ್ಶನ ಪಡೆಯುವ ಸಾರ್ವಜನಿಕರಿಗೆ ನಾಳೆ ಸಂಜೆ ತೆರೆಬೀಳಲಿದೆ.